ಬೆಂಗಳೂರು: ಹೋಟೆಲ್, ಪಾರ್ಕ್, ಕೇಕು, ಕೋಲ್ಡ್ರಿಂಕ್ಸ್, ಬಲೂನ್ಸ್, ಕ್ಯಾಂಡಲ್ಸ್ಗಳು ಇಲ್ಲದೇ ಇಂದು ಬರ್ತ್ಡೇ ಆಚರಿಸಿಕೊಳ್ಳುವುದೇ ವಿರಳ. ನರ್ಸರಿ ಮಟ್ಟದಲ್ಲಿಯೂ ಇದು ಹೆಚ್ಚಾಗಿದ್ದು, ಕನಿಷ್ಟ ಚಾಕೊಲೇಟ್ ಆದರೂ ಕೊಡುವ ಪರಿಪಾಠ ಸಾಮಾನ್ಯವಾಗಿದೆ.
ಆದರೆ, ಬೆಂಗಳೂರಿನ ಹರಿಣಿ (೬ವರ್ಷ) ತನ್ನ ಜನ್ಮದಿನದಂದು ಪೋಷಕರೊಂದಿಗೆ ಸಸಿ ನೆಡುತ್ತಾಳೆ. ಸ್ವಾಮಿನಾಥನ್ ಹರಿಣಿಯ ತಂದೆ. ಎಂಎನ್ಸಿಯಲ್ಲಿ ಉದ್ಯೋಗ. ಮೊದಲ ವರ್ಷದ ಹುಟ್ಟುಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದ್ದಾರೆ. ನಂತರ ಪರಿಸರ ಪ್ರಜ್ಞೆ ಜಾಗೃತವಾಗಿದೆ. ಪರಿಣಾಮ ತಮ್ಮ ಮುದ್ದು ಮಗಳ ಪ್ರತಿ ಜನ್ಮದಿನದಂದು ಸಸಿ ನೆಡುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷ.
ಸ್ವಾಮಿನಾಥನ್ ಅವರ ಅಧ್ಯಾತ್ಮಿಕ ಗುರು ಮಹತ್ರಿಯ ರಾ ಅವರು ಹೇಳಿದಂತೆ ಸಂಖ್ಯೆ 11 ಇವರಿಗೆ ಶುಭವಂತೆ. ಕಾರಣ ಅವರು ಪ್ರತಿ ವರ್ಷ ಅವರು 111 ಸಸಿಗಳನ್ನು ನೆಡುತ್ತಾರೆ. ತಮ್ಮ ತಾಯಿ ಭಾಮಾ ನರಸಿಂಹನ್ ಅವರೂ ಕೂಡಾ ಪರಿಸರ ಪ್ರೇಮಕ್ಕೆ ಪ್ರೇರಕರಂತೆ.
ಹರಿಣಿ ಸ್ವಾಮಿನಾಥನ್ ಅವಳ ಬರ್ತ್ಡೇ ಮಾತ್ರ ಪ್ರತಿವರ್ಷವೂ ಬಿಸಿಲು ಅಥವಾ ಮಳೆಯಲ್ಲಿಯೇ ಆಚರಿಸಿಕೊಂಡಂತಾಗುತ್ತದೆ. ಏಕೆಂದರೆ ಸಸಿ ನೆಡಲು ಪೋಷಕರು ತೆಗ್ಗು ತೆಗೆಯುವ ಕಾರ್ಯ ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಹರಿಣಿಯೂ ಅಲ್ಲಿರುತ್ತಾಳೆ.
ಇದುವರೆಗೂ 500 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ. ಅವುಗಳಲ್ಲಿ ಅರ್ಧದಷ್ಟಾದರೂ ಉಳಿದುಕೊಂಡಿದ್ದರೆ ಸಾಕು, ಅವು ವೈವಿಧ್ಯಮಯವಾದ ಪಕ್ಷಿಗಳಿಗೆ ಸೂರು ಒದಗಿಸಿದಂತಾಗುತ್ತದೆ ಎಂದು ಮಗಳಿಗೆ ಹೇಳುತ್ತಾರಂತೆ ಸ್ವಾಮಿನಾಥನ್.
ಜುಲೈ ಕೊನೆಯ ವಾರದಲ್ಲಿ ಹರಿಣಿಯ ಜನ್ಮದಿನ. ಹರಿಣಿ ಮತ್ತೆ ಸಸಿ ನೆಡಲು ಉತ್ಸುಕಳಾಗಿದ್ದಾಳಂತೆ. ಕುಣಿದು, ಕುಪ್ಪಳಿಸಿ, ಸಮಯ, ಹಣ ವ್ಯರ್ಥಗೊಳಿಸಿ ಆಚರಿಸುವ ಬರ್ತ್ಡೇಗಿಂತಲೂ, ಅರ್ಥಪೂರ್ಣವಾಗಿ ಆಚರಿಸುವುದು ವಿಹಿತ ಎನ್ನಲು ಹರಿಣಿ ಪೋಷಕರು ಮಾದರಿ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.