ಬೆಂಗಳೂರು: ಒಂದೆಡೆ ಇವಿಎಂ ದೋಷ ಎಂದು ಆರೋಪಿಸುತ್ತಿರುವ ಕಾಂಗ್ರೆಸ್, ರಾಜ್ಯದ ಉಪ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದು ಇದನ್ನು ಹೇಗೆ ಸ್ವೀಕರಿಸಿತೋ ಎಂಬುದು ನಿಜಕ್ಕೂ ಕುತೂಹಲ.
ಪಂಚರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ ನಂತರ ಇವಿಎಂನಲ್ಲಿ ದೋಷ ಇದೆ ಎಂದು ಮೊದಲು ರಾಗ ತೆಗೆದಿದ್ದು ಬಿಎಸ್ಪಿ ನಾಯಕಿ ಮಾಯಾವತಿ. ಇದೀಗ ಡಿಎಂಕೆ, ಎಸ್ಪಿ ಅಷ್ಟೇ ಅಲ್ಲದೇ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೂಡಾ ಅದಕ್ಕೆ ಬೆಂಬಲ ನೀಡಿದೆ. ವಿಪಕ್ಷಗಳೆಲ್ಲ ಸೇರಿ ರಾಷ್ಟ್ರಪತಿಗಳಿಗೆ ಮೊರೆ ಹೋಗಿವೆ.
ವಿದ್ಯುನ್ಮಾನ ಯಂತ್ರದ ಬದಲು, ಬ್ಯಾಲೆಟ್ ಪೇಪರ್ ಬಳಸಬೇಕಿತ್ತು. ಏಕೆಂದರೆ ಮತಯಂತ್ರಗಳಲ್ಲಿ ದೋಷ ಇದೆ. ಯಾವುದೇ ಬಟನ್ ಒತ್ತಿದರೂ ಅದು ಬಿಜೆಪಿಗೆ ಹೋಗುತ್ತಿತ್ತು ಎಂಬುದು ದೂರುದಾರ ಪಕ್ಷಗಳ ಗಂಭೀರ ಆರೋಪ.
ಇವೆಲ್ಲ ಬೆಳವಣಿಗೆ ಕಂಡ ಚುನಾವಣಾ ಆಯೋಗ ಬಹಿರಂಗ ಸವಾಲನ್ನೂ ಹಾಕಿದ್ದು, ಸ್ವತಃ ಮತಯಂತ್ರಗಳ ತಯಾರಕರಿಂದಲೂ ಅದನ್ನು ತಿರುಚಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದೆ.
ಇಂದು ರಾಜ್ಯದ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣಾ ಫಲಿತಾಂಶ ಬಂದಿದ್ದು, ಕೈ ಮೇಲಾಗಿದೆ. ಈಗ ಕಾಂಗ್ರೆಸ್ನವರು ಇವಿಎಂಗಳ ಬಗ್ಗೆ ಬಹುಶಃ ಮಾತನಾಡುವುದೇ ಇಲ್ಲ. ಈ ಕುರಿತು ಕಾಂಗ್ರೆಸ್ನ ಕೆಲ ಸಚಿವರನ್ನು ನ್ಯೂಸ್-೧೩ ಮಾತನಾಡಿಸಲು ಪ್ರಯತ್ನಿಸಿದರೆ ಅವರು ದೂರವಾಣಿಗೆ ಸಿಗುತ್ತಿಲ್ಲ. ಗೆದ್ದ ಉಮೇದಿಯಲ್ಲಿರುವ ಕಾಂಗ್ರೆಸ್ಗೆ ಇವಿಎಂ ಬಗ್ಗೆ ಮಾತನಾಡಲು ಪುರಸೊತ್ತೂ ಇಲ್ಲ ಎನಿಸುತ್ತೆ.
ದೇಶದ ವಿವಿಧೆಡೆ ನಡೆದಿದ್ದ ಇತರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಕೇಕೆ ಹಾಕಿದೆ. ದೆಹಲಿ, ಅಸ್ಸಾಂ, ಹಿಮಾಚಲ ಇತ್ಯಾದಿ ಕಡೆ ಕಮಲ ಅರಳಿದೆ. ಕರ್ನಾಟಕದಲ್ಲಿ ಕೈ ಮೇಲಾಗಿದೆ. ಇದು ಜನರ ತೀರ್ಪು.
ಪ್ರಜಾ ಪ್ರಭುತ್ವದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಅದು ಮತದಾರ ಪ್ರಭುವಿನ ತೀರ್ಪು. ಅದನ್ನು ಬಿಟ್ಟು ವೃಥಾ ಆರೋಪ ಮಾಡುವ ಮೂಲಕ, ಪಾರದರ್ಶಕ ವ್ಯವಸ್ಥೆಯ ನಂಬಿಕೆಗೂ ಧಕ್ಕೆ ತರುವುದು ಯಾವ ನ್ಯಾಯ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.