ಜಮಖಂಡಿ: ರಾಮತೀರ್ಥ ಅರಮನೆ ಜಮಖಂಡಿ ಸಂಸ್ಥಾನದ ಪಟವರ್ಧನ ರಾಜಮನೆತನದವರು ವಾಸಿಸಿದ ಅರಮನೆ. ಸುಮಾರು 2 ಶತಮಾನಗಳ ಕಾಲ ರಾಜ್ಯಭಾರ ನಡೆಸಿದ ಪಟವರ್ಧನ್ ರಾಜ ಮನೆತನದ ರಾಮತೀರ್ಥ ಅರಮನೆ ಆವರಣ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅರಮನೆ ನೋಡಿದಾಗೊಮ್ಮೆ ಗತವೈಭವದ ಕಥೆ ಹೇಳಿದಂತೆ ಭಾಸವಾಗುತ್ತದೆ.
ಜಮಖಂಡಿ ರಾಮಾಯಣ ಕಾಲದ ದಂಡಕಾರಣ್ಯದ ಭಾಗವಾಗಿತ್ತು. ಈಗಿನ ಅರಮನೆಯ ಭಾಗದಲ್ಲಿ ಪೂರ್ವಕ್ಕೆ ಶ್ರೀ ರಾಮಚಂದ್ರ ದೇವರು ಈಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು ಪುರಾಣದಲ್ಲಿ ಉಲ್ಲೇಖವಿದೆ. ಆಗಿನಿಂದ ಈ ಕ್ಷೇತ್ರಕ್ಕೆ ರಾಮತೀರ್ಥ ಎಂಬ ಹೆಸರು ಬಂದಿತೆಂದು ಹಿರಿಯರು ಹೇಳುತ್ತಾರೆ.
ಸುಮಾರು ಸಾವಿರಾರು ವರ್ಷದ ಇತಿಹಾಸ ಹೊಂದಿರುವ ನಗರ. ರಾಜ ಮಹಾರಾಜರು ಆಳಿ ಹೋಗಿದ್ದಾರೆ. ತೀರ್ಥಂಕರರ ಕಾಲದಲ್ಲಿ 70 ಹಳ್ಳಿಗಳನ್ನೊಳಗೊಂಡ ಜಮಖಂಡಿ ಹೆಸರು ಉಲ್ಲೇಖಗೊಂಡಿದೆ. ವಿಜಯ ನಗರದ ಆಳರಸರ ಕಾಲದಲ್ಲಿ ಕೊಣ್ಣೂರಿನ ದೇಸಾಯಿಯವರ ಆಡಳಿತಕ್ಕೆ ಇದು ಒಳಪಟ್ಟಿತ್ತು. ವಿಜಯ ನಗರದ ಪತನದ ನಂತರ ಮರಾಠಿಗರಾದ ಪೇಶ್ವೆ ಆಡಳಿತದಲ್ಲಿ ಜಮಖಂಡಿಯು 17 ನೇ ಶತಮಾನದ ಮಧ್ಯ ಭಾಗದಲ್ಲಿ ಪಟವರ್ಧನ್ ಮಾಂಡಲೀಕರ ಆಡಳಿತಕ್ಕೆ ಒಳಪಟ್ಟಿತು. ಕ್ರಿ. ಶ. 1766 ರ ಸುಮಾರಿಗೆ ಪರಶುರಾಮ ಬಾವು ಪಟವರ್ಧನ್ರು ಜಮಖಂಡಿಯ ಪ್ರಥಮ ಸಂಸ್ಥಾನಿಕರಾಗಿ ಕಾರ್ಯ ನಿರ್ವಹಿಸಿದರು. ಈ ಆಳರಸರ ಕಾಲದಲ್ಲಿ ರಾಮಚಂದ್ರ ಅಪ್ಪಾಸಾಹೇಬ ಪಟವರ್ಧನ್ ಮಹಾರಾಜರು 44 ವರ್ಷಗಳ ಸುದೀರ್ಘ ರಾಜ್ಯ ಭಾರ ನಡೆಸಿ ಜಮಖಂಡಿಯ ಸಮಗ್ರ ಅಭಿವೃದ್ಧಿಗೆ ಕಾರಣೀಭೂತರಾದರಂತೆ.
200 ಎಕರೆ ಭೂಮಿಯಲ್ಲಿ ಅರಮನೆ
ರಾಮತೀರ್ಥದಲ್ಲಿ ತಮ್ಮ ರಾಜ್ಯ ಕಲಾಪಕ್ಕೆ ಅನುಗುಣವಾಗಿ ಸುಂದರ ಅರಮನೆಯನ್ನು ರಾಜರು ನಿರ್ಮಿಸಿಕೊಂಡಿದ್ದರು. ಸುಮಾರು 200 ಎಕರೆ ಭೂಪ್ರದೇಶದಲ್ಲಿ ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಿ ಸುಭಿಕ್ಷೆಯಾಗಿ ರಾಜ್ಯವಾಳಿದರು. ಆಗಿನ ಕಾಲದಲ್ಲಿಯೇ ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಹಿರಿಮೆ ಇವರದ್ದು.
ಪ್ರಥಮ ವಿಲಿನೀಕರಣ
ಸಂಸ್ಥಾನದ ಕೊನೆಯ ಅರಸರಾದ ೩ ನೇ ಪರಶುರಾಮ ಶಂಕರರಾವ್ ಪಟವರ್ಧನ್ರವರು ಭಾರತ ಸ್ವಾತಂತ್ರ್ಯಾನಂತರ ರಾಷ್ಟ್ರ ವಿಲಿನೀಕರಣ ಕಾಲದಲ್ಲಿ ತಮ್ಮ ಸಂಸ್ಥಾನವನ್ನು ಪ್ರಥಮ ವಿಲಿನೀಕರಣ ಮಾಡಿ ಆದರ್ಶ ಮೆರೆದರು. ಸಂಸ್ಥಾನಿಕರು ಕ್ರೀಡೆಗೆ ಬಹುಮುಖ್ಯ ಪ್ರಾಮುಖ್ಯತೆ ನೀಡಿ ವಿಶಾಲವಾದ ಗರಡಿಮನೆ ನಿರ್ಮಿಸಿದ್ದು ಇತಿಹಾಸ.
ಅನೈತಿಕ ಚಟುವಟಿಕೆಗಳ ತಾಣ
ಗತ ವೈಭವ ಅಕ್ಷರಶಃ ಸತ್ಯ. ವೈಭವ ಇದೀಗ ನೆನಪು ಮಾತ್ರ. ಅರಸರು ಕಟ್ಟಿದ ಅನೇಕ ಸುಂದರ ಕಟ್ಟಡಗಳು ಭಗ್ನವಾಗಿವೆ. ಅದರಲ್ಲಿ ಒಂದು ಮೋಹಿನಿ ಮಹಲ್ ಎಂಬ ನಾಟ್ಯ ಮಂದಿರ ಇಲ್ಲಿ ಧ್ವನಿ ವರ್ಧಕವಿಲ್ಲದೇ ಸಹಸ್ರಾರು ಜನರು ರೂಪಕವನ್ನು ಆಲಿಸಬಹುದಾದ ಸುವ್ಯವಸ್ಥಿತ ತಂತ್ರಜ್ಞಾನ ಅಳವಡಿಸಿದ್ದರು. ಆದರೆ ಅದು ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಅದರ ನೆನಪು ಮಾತ್ರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ಜೂಜುಕೋರರ ಅಡ್ಡೆ
ಅರಮನೆಯ ಆವರಣದಲ್ಲಿದ್ದ ಸುಂದರ ದೇವಾಲಯಗಳು ಸಂಪೂರ್ಣವಾಗಿ ಭಗ್ನಗೊಂಡಿವೆ, ನಿಧಿ ಚೋರರ ಕೆಂಗಣ್ಣಿಗೆ ಗುರಿಯಾಗಿ ಅಲ್ಲಿದ್ದ ಶಿಲಾ ಮೂರ್ತಿಗಳು ಕಾಣೆಯಾಗಿವೆ. ಇಲ್ಲದ ಅಕ್ರಮ, ಅನೈತಿಕ ಚಟುವಟಿಕೆಗಳ, ಜೂಜುಕೋರರ ತಾಣವಾಗಿದೆ. ಪ್ರವಾಸಿಗರು ಅರಮನೆಯ ವೈಭವ ನೋಡಲು ಹೋಗದ ಪರಿಸ್ಥಿತಿ ಅಲ್ಲಿಲ್ಲ.
ಸಂಬಂಧಪಟ್ಟ ಇಲಾಖೆಯವರು ಮುತುವರ್ಜಿ ವಹಿಸಿ ಇಂತಹ ಅನೇಕ ಅವಶೇಷಗಳನ್ನು ರಕ್ಷಿತ ಪ್ರದೇಶಗಳನ್ನಾಗಿ ಮಾರ್ಪಡಿಸಿ ಕಾಪಾಡುವ ಅವಶ್ಯಕತೆ ಇದೆ ಎನ್ನುತ್ತಾರೆ ಸ್ಥಳೀಯ ನಾಗರಿಕರು. ವೈಭವ ಇತಿಹಾಸದ ಪುಟ ಸೇರಿದರೇನಾಯಿತು? ನೆನಪುಗಳಾದರೂ ಜೀವಂತ ವಾಗಿರಬೇಕಲ್ಲವೇ? ನಾಗರಿಕರು, ಜನಪ್ರತಿನಿಧಿಗಳು, ಆಳುವ ಸರ್ಕಾರಗಳು ಈ ನಿಟ್ಟಿನಲ್ಲಿ ಜವಾಬ್ದಾರಿ ಮೆರೆಯಬೇಕಿದೆ.
ಚಿತ್ರ ಲೇಖನ: ಗೋಪಾಲ ಪಿ., ಜಮಖಂಡಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.