ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರು ವಿಶ್ವದ ಹಲವು ಐಟಿ ನಗರಗಳಲ್ಲಿ ಒಂದು ಎಂದು ಕೇಳಲು ಆಶ್ಚರ್ಯ ಆಗದೇ ಇರಬಹುದು. ಆದರೆ ಐಟಿ ಕಂಪೆನಿಗಳು ತಾವೇ ತರಕಾರಿಗಳನ್ನು ಬೆಳೆಸಿ ಮಾರಾಟ ಮಾಡುತ್ತಿರುವ ಬಗ್ಗೆ ಕೇಳಲು ಒಲವು ತೋರುವುದು ಸಹಜ.
ಅಂಥದ್ದರಲ್ಲಿ ಒಂದಾಗಿರುವ ಬೆಂಗಳೂರಿನ ದೊಮ್ಲೂರು ಮೂಲದ ಸಾಸ್ಕೆನ್ ಟೆಕ್ನಾಲಜೀಸ್ ಕಂಪೆನಿ ಬಂಜರು ಭೂಮಿಯೊಂದನ್ನು ಸಾವಯವ ಕೃಷಿತೋಟವಾಗಿ ಪರಿವರ್ತಿಸಿದೆ. ಈ ತೋಟದಲ್ಲಿ ಎಲೆಕೋಸು, ಪಾಲಕ್, ಟೊಮ್ಯಾಟೋ, ಸ್ವೀಟ್ ಕಾರ್ನ್, ಬೆಂಡೆಕಾಯಿ, ಕ್ಯಾರೆಟ್, ಬೀಟ್ರೂಟ್, ಮೂಲಂಗಿ ಮೊದಲಾದ ವಿವಿಧ ತರಕಾರಿಗಳನ್ನು ಬೆಳೆಸಲಾಗುತ್ತಿದೆ.
ಸಾಸ್ಕೆನ್ ಒಡೆತನದ 4 ಎಕರೆ ಬಂಜರು ಭೂಮಿ ಸಂಪೂರ್ಣವಾಗಿ ಬಳಸದೇ ಖಾಲಿ ಬಿದಿದ್ದು, ಇದರಲ್ಲಿ ಒಂದು ಭಾಗ ಕ್ರಿಕೆಟ್ ಮತ್ತು ಬಾಸ್ಕೆಟ್ಬಾಲ್ ಮೈದಾನವಾಗಿ ಬಳಸಲಾಗುತ್ತಿದೆ.
ಇನ್ನೂ ಒಂದು ಎಕರೆ ನಿರುಪಯುಕ್ತ ಭೂಮಿಯನ್ನು ಹಸಿರು ತೋಟವನ್ನಾಗಿ ಬಳಸುವ ಕಲ್ಪನೆಯೊಂದಿಗೆ ಈ ಬೂಮಿಯಲ್ಲಿ ತರಕಾರಿಗಳನ್ನು ಬೆಳೆಸಲಾಗುತ್ತಿದೆ ಎಂದು ಕಂಪೆನಿಯ ಐಟಿ ಕಾರ್ಯಾಚರಣೆ ಮತ್ತು ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ದತ್ ಹೇಳಿದ್ದಾರೆ.
ಆರಂಭದಲ್ಲಿ ಈ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದ್ದು, ಅನಂತರ ಅಲ್ಲಿಯ ಮಣ್ಣನ್ನು ಪರೀಕ್ಷೆ ಮಾಡಿ ಅದರ ಆಧಾರದ ಮೇಲೆ ಈ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಈ ತರಕಾರಿಗಳನ್ನು ಕಂಪೆನಿ ಮಾರುಕಟ್ಟೆ ದರಕ್ಕಿಂತ ಶೇ.20ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಮಿನಿ ಮಾರುಕಟ್ಟೆಯ ತರಕಾರಿಗಳ ದೈನಂದಿನ ಬೆಲೆಯನ್ನು ತಿಳಿದುಕೊಳ್ಳಲು ಕಂಪೆನಿ ಹೋಪ್ಕಾಮ್ ಜೊತೆ ಟೈ-ಅಪ್ ಮಾಡಿಕೊಂಡಿದೆ.
ಇದು ಸಂಪೂರ್ಣ ನೈಸರ್ಗಿಕವಾಗಿದ್ದು, ಇದಕ್ಕೆ ಯಾವುದೇ ರಾಸಾಯನಿಕ ಮತ್ತು ಕೀಟನಾಶವನ್ನು ಬಳಸಲಾಗುವುದಿಲ್ಲ ಎಂದು ಸುನಿಲ್ ದತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.