ಕೊಪ್ಪಳ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಲ್ಲಂಗಡಿ ಬೆಳೆಯಲು ಹನಿ ನೀರಾವರಿ ಪದ್ಧತಿಯ ಜೊತೆಗೆ ಇಸ್ರೇಲ್ ಮಾದರಿಯ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಖರ್ಚು ಕಡಿಮೆ, ಆದಾಯ ಹೆಚ್ಚು ಬರುವ ರೀತಿಯಲ್ಲಿ ಬರದ ನಡುವೆಯೂ ಬಂಪರ್ ಕಲ್ಲಂಗಡಿ ಬೆಳೆದ ರೈತರು ಇತರರಿಗೆ ಮಾದರಿಯೆನಿಸಿದ್ದಾರೆ.
ಬದುಕಿನ ಬಂಡಿ ಸಾಗಿಸಲು ಹತ್ತು ಹಲವು ದಾರಿಗಳಿವೆ. ಆದರೆ ಬೇಸಾಯವೆಂದರೆ ವೃಥಾ ಶ್ರಮವೆಂದು ಮೂಗು ಮುರಿಯುವ ಯುವಕರೇ ಹೆಚ್ಚು. ಆದರೆ ಎಫ್-1 ಹೈಬ್ರಿಡ್ ತಳಿಯ ಕಲ್ಲಂಗಡಿ ಬೆಳೆದ ಕೊಪ್ಪಳ ತಾಲೂಕಿನ ಶಹಾಪುರ, ಬೇವಿನಹಳ್ಳಿ ಮತ್ತು ರುದ್ರಾಪುರ ಗ್ರಾಮದ ರೈತರು ಲಕ್ಷ, ಲಕ್ಷ ರೂಪಾಯಿ ಭರಪೂರ ಆದಾಯ ಗಳಿಸುತ್ತಿದ್ದಾರೆ.
ತೋಟಗಾರಿಕೆ ಬೆಳೆಗೆ ಸೂಕ್ತ
ತೋಟಗಾರಿಕೆ ಬೆಳೆಗಳಿಗೆ ಕೊಪ್ಪಳ ಜಿಲ್ಲೆ ಸೂಕ್ತ ಹವಾಮಾನ, ವಾತಾವರಣ, ಮಣ್ಣಿನ ಗುಣಮಟ್ಟ ಪೂರಕವಾಗಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದು ಯಶಸ್ಸು ಕಂಡವರು ಬಹಳಷ್ಟು ರೈತರು. ಇಂಥ ಪರಿಸರದ ಲಾಭ ಹೊಂದಲು ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆಯು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರತಿ ತಾಲೂಕಿನಲ್ಲಿ ತಲಾ ಮೂರು ಗ್ರಾಮಗಳನ್ನು ಗುಚ್ಛ ಗ್ರಾಮಗಳಾಗಿ ಆಯ್ಕೆ ಮಾಡಿ, ಹೊಸ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದು, ಈ ಮೂಲಕ ರೈತರಿಗೆ ಉತ್ತೇಜನ ನೀಡುತ್ತಿದೆ.
ಕೊಪ್ಪಳ ತಾಲೂಕಿನ ಶಹಾಪುರ, ಬೇವಿನಹಳ್ಳಿ ಮತ್ತು ರುದ್ರಾಪುರ ಗ್ರಾಮದ ಇಪ್ಪತ್ತೈದು ರೈತರ ಸುಮಾರು 50 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಸೊಗಸಾಗಿ ಬೆಳೆದಿರುವ ನೋಟ ಕಾಣಸಿಗುತ್ತದೆ. ಪ್ರತಿಯೊಂದು ಬಳ್ಳಿಯಲ್ಲೂ 8 ರಿಂದ 10 ಕೆ.ಜಿ ತೂಗುವ ದೊಡ್ಡ ದೊಡ್ಡ ಸೈಜಿನ ಕಲ್ಲಂಗಡಿ ನಳನಳಿಸುತ್ತಿದ್ದು, ಕಲ್ಲಂಗಡಿ ಹಣ್ಣು ಎಂದರೆ ಹೀಗಿರಬೇಕು ಎನಿಸುತ್ತದೆ.
ಈ 50 ಎಕರೆ ಜಮೀನು ಒಬ್ಬ ರೈತನದ್ದಲ್ಲ. ಒಟ್ಟು 25 ಜನ ರೈತರು ಒಟ್ಟಾಗಿ ತಮ್ಮ ತಮ್ಮ ಹೊಲದಲ್ಲಿ ಒಂದೇ ತಳಿಯ ಕಲ್ಲಂಗಡಿ ಬೆಳೆದು, ಒಟ್ಟಾಗಿಯೇ ದುಡಿದು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ರೈತರ ಪರಿಶ್ರಮ
ಕೊಪ್ಪಳ ತಾಲೂಕಿನ ಶಹಾಪುರ, ಬೇವಿನಹಳ್ಳಿ ಮತ್ತು ರುದ್ರಾಪುರ ಗ್ರಾಮಗಳ ರೈತರಾದ ಅನ್ನವ್ವ ಮಡ್ಡಿ, ಕರಿಯಪ್ಪ ಕುರಿ, ಸಿದ್ದಪ್ಪ ಅಡಗಿ, ಮುಕ್ಕಣ್ಣ ಮಡ್ಡಿ, ಸೋಮಣ್ಣ ಬೆಟಗೇರಿ, ಮಲ್ಲಯ್ಯ ಹಿರೇಮಠ, ಭೀಮಪ್ಪ ಬಸರಿಹಾಳ, ಶಂಕ್ರಮ್ಮ ವಡಿಯರ್, ನಿಂಗಜ್ಜ, ರಾಮಪ್ಪ ಕುರಿ, ಮಾರ್ಕಂಡೆಪ್ಪ, ಮಾರುತಿ ಪೂಜಾರ್ ಸೇರಿದಂತೆ 25 ಜನ ರೈತರು ಈ ಯಶೋಗಾಥೆಯ ರೂವಾರಿಗಳು.
ಹೊಸ ತಂತ್ರಜ್ಞಾನ
ಕಲ್ಲಂಗಡಿ ಬೆಳೆಯನ್ನು ಜಮೀನಿನಲ್ಲಿ ಸಾಮಾನ್ಯ ಕೃಷಿ ಹಾಗೂ ನೀರು ಜಮೀನಿಗೆ ಹಾಯಿಸುವ ಪದ್ಧತಿಯಲ್ಲಿ ಬೆಳೆಯುವುದನ್ನು ಕಾಣುತ್ತೇವೆ. ತೋಟಗಾರಿಕೆ ಇಲಾಖೆಯ ನೆರವು ಹಾಗೂ ಸಲಹೆಯಂತೆ ಇಸ್ರೇಲ್ ದೇಶದ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ.
ಭೂಮಿಯನ್ನು ಹದಗೊಳಿಸಿದ ನಂತರ ಏರು ಮಡಿ ಮಾಡಿಕೊಳ್ಳಲಾಗುತ್ತದೆ. ನಂತರ ಹನಿ ನೀರಾವರಿಗಾಗಿ ಪೈಪ್ ಅಳವಡಿಸಿಕೊಂಡು, ಇದಕ್ಕೆ ಪ್ಲಾಸ್ಟಿಕ್ ಹೊದಿಕೆ (ಮಲ್ಚ್) ಹಾಕಲಾಗುತ್ತದೆ. ನೀರು ಹಾಯಿಸುವ ಪದ್ದತಿಯಲ್ಲಿ 1 ಎಕರೆಗೆ ಬಳಕೆ ಮಾಡಬಹುದಾದ ನೀರನ್ನು, ಇಲ್ಲಿನ ಹನಿ ನೀರಾವರಿ ಪದ್ಧತಿಯಲ್ಲಿ 3 ಎಕರೆಗೆ ಬಳಸಬಹುದು.
ಪ್ಲಾಸ್ಟಿಕ್ ಹೊದಿಕೆ ಬಳಸುವುದರಿಂದ, ಕಳೆ ಕಡಿಮೆ, ಬಳ್ಳಿಗೆ ರೋಗಬಾಧೆ ತಗಲುವ ಭೀತಿಯೂ ಇಲ್ಲ. ಹೊಸ ತಂತ್ರಜ್ಞಾನದಲ್ಲಿ ಪ್ರತಿ ಎಕರೆಗೆ ಸುಮಾರು 10 ರಿಂದ 15 ಟನ್ ಕಲ್ಲಂಗಡಿ ಬೆಳೆ ಬರುತ್ತದೆ. ನೀರು ಮತ್ತು ವಿದ್ಯುತ್ ಸಮಸ್ಯೆ ಸಾಮಾನ್ಯವಾಗಿರುವ ಈ ಕಾಲದಲ್ಲಿ ಹೊಸ ಪದ್ಧತಿಯ ಅಳವಡಿಕೆ ನಿಜಕ್ಕೂ ರೈತರಿಗೆ ವರದಾನ.
ಪ್ಲಾಸ್ಟಿಕ್ ಹೊದಿಕೆಯಿಂದ ಬೆಳೆಯ ಕಳೆ ನಿಯಂತ್ರಣವಾಗುವುದು. ಹನಿ ನೀರಾವರಿ ಹಾಗೂ ರಸಾವರಿಯಿಂದಾಗಿ ನೀರಿನ ಸಮರ್ಪಕ ಬಳಕೆ ಮತ್ತು ಸಸ್ಯಗಳ ಸಮಗ್ರ ಪೋಷಣೆಯಿಂದಾಗಿ ಕೂಲಿ ಆಳಿನ ಖರ್ಚು ಸಹ ಕಡಿಮೆಯಾಗಿ, ಲಾಭದಾಯಕವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸುತ್ತಾರೆ. ಹೆಚ್ಚಿನ ಮಾಹಿತಿಗೆ ಕೊಪ್ಪಳದ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್ನ ಸಲಹಾಧಿಕಾರಿ ವಾಮನಮೂರ್ತಿ ಅವರನ್ನು 9482672039 ಸಂಪರ್ಕಿಸಬಹುದು.
news13
-ತುಕಾರಾಂರಾವ್ ಬಿ.ವಿ., ಕೊಪ್ಪಳ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.