ಮುಂಬಯಿ: ಅವನು ಕೇವಲ ಫೋಟೊ ಕ್ಲಿಕ್ಕಿಸುವುದಿಲ್ಲ, ಅನೇಕ ಜೀವಗಳನ್ನು ಉಳಿಸಲು ತನ್ನ ಪ್ರಾಣವನ್ನೂ ಪಣಕ್ಕಿಡುತ್ತಾನೆ. ಮಾನವೀಯತೆಯ ಮೇರು ಬಂಟಿ ರಾವ್ ಯುವಜನತೆಗೊಂದು ಮಾದರಿ.
ಜಾರ್ಖಂಡ್ನ ಜೆಮ್ಶೆಡ್ಪುರದಲ್ಲಿದ್ದ ನೌಕರಿಯನ್ನು ಬಿಟ್ಟು, ಬದುಕನ್ನು ಕಟ್ಟಿಕೊಳ್ಳಲು ಕನಸಿನ ಮಾಯಾ ನಗರಿ ಮುಂಬಯಿಗೆ ಬಂಟಿ ರಾವ್ ಬರ್ತಾರೆ. ಆ ಯುವ ಮನದಲ್ಲಿದ್ದ ಕನಸುಗಳು ಎರಡು. ಒಂದು ಫೋಟೊಗ್ರಫಿ ಹಾಗೂ ಪರೋಪಕಾರ.
ಮುಂಬಯಿನ ಜುಹು ಬೀಚ್ನಲ್ಲಿ ಫೊಟೊಗ್ರಫಿಯನ್ನೇ ತಮ್ಮ ಜೀವನದ ವೃತ್ತಿಯನ್ನಾಗಿ ಆರಂಭಿಸುತ್ತಾರೆ ಬಂಟಿ ರಾವ್. ಕೊರಳಿಗೊಂದು ಡಿಎಸ್ಎಲ್ಆರ್ ಕ್ಯಾಮೆರಾ ಹಾಕಿಕೊಂಡು ಕಡಲ ತೀರದಲ್ಲಿರುವ ಇವರು ಪ್ರವಾಸಿಗರಿಗೆ ಅಚ್ಚುಮೆಚ್ಚು.
ಇವರ ಉತ್ತಮ ಫೊಟೊಗ್ರಫಿ ಕಂಡ ಅನೇಕ ನಿರ್ದೇಶಕರು ಪ್ರಭಾವಿತಗೊಂಡಿದ್ದಾರೆ. ವಿವಿಧ ಸಾಕ್ಷ್ಯಚಿತ್ರ, ಕಿರುಚಿತ್ರಗಳಿಗೂ ಫೊಟೊಗ್ರಫಿ ಮಾಡಿರುವ ಅನುಭವ ಹೊಂದಿರುವ ಅವರು, ಇನ್ಸಾನ್ ಆಂಡ್ ಬೇವಫಾ ಎಂಬ ಸಿನಿಮಾ ಫೊಟೊಗ್ರಫಿಯಲ್ಲೂ ಸಹಕರಿಸಿದ್ದಾರಂತೆ.
ಕಡಲತೀರದಲ್ಲಿ ಹೆಚ್ಚಾಗುತ್ತಿದ್ದ ಸಾವು-ನೋವುಗಳನ್ನು ತಡೆಯಲು Baywatch Lifeguard Association(BLA) ಎಂಬ ಸಂಸ್ಥೆಯನ್ನು ಸಯೀದ ಶಮಾ ಎಂಬುವರು ಪ್ರಾರಂಭಿಸುತ್ತಾರೆ. ಇದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪಾರಾಗುವ ಹಾಗೂ ಪ್ರಾಥಮಿಕ ಚಿಕಿತ್ಸೆ ನೀಡುವ ಕುರಿತು ತರಬೇತಿಯನ್ನು ನೀಡುತ್ತದೆ.
ಇದೇ ಸಂಸ್ಥೆಯಿಂದ ತರಬೇತಿ ಪಡೆದಿರುವ ಬಂಟಿ ರಾವ್, ಅನೇಕ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಷ್ಟದಲ್ಲಿದ್ದವರಿಗೆ ಉಚಿತವಾಗಿ ಸೇವೆ ಒದಗಿಸುವುದು ಬಂಟಿ ವಿಶೇಷ. ಗಣಪತಿ ವಿಸರ್ಜನೆ ವೇಳೆ ಹೆಚ್ಚು ಪ್ರಕರಣಗಳು ಸಂಭವಿಸುತ್ತವೆ ಎನ್ನುವ ಅವರು, 16 ವರ್ಷಗಳಿಂದ ಈ ಸೇವೆ ಮಾಡುತ್ತಿರುವುದಾಗಿ ಹೇಳುತ್ತಾರೆ. ಯಾವುದೇ ಹಣದ ಅಪೇಕ್ಷೆಯಿಲ್ಲ. ಜನರಿಗೆ ನೆರವು ನೀಡುವುದೇ ಪ್ರಧಾನ ಉದ್ದೇಶ. ಪ್ರತಿದಿನ ಬೆಳಿಗ್ಗೆ ಬೀಚ್ನಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡುವುದು ಅವರ ಕಾಯಕದಲ್ಲೊಂದು.
’ರಾತ್ರಿ 10 ಗಂಟೆವರೆಗೂ ಕಡಲ ತೀರದಲ್ಲೇ ಠಿಕಾಣಿ ಹೂಡಿರುವೆ. ತುರ್ತು ಸಂದರ್ಭದಲ್ಲಿ ಜನರು ನನ್ನನ್ನು ಸಂಪರ್ಕಿಸುತ್ತಾರೆ. ಪ್ರತಿದಿನವೂ ಜನ ಸುರಕ್ಷಿತವಾಗಿರಬೇಕೆಂಬುದೇ ನನ್ನ ಆಶಯ’ ಎಂದು ಅವರು ಹೇಳುತ್ತಾರೆ.
ವೃತ್ತಿ ಜೀವನದ ಜೊತೆ, ಮಾನವೀಯ ಕಾರ್ಯಕ್ಕೆ ಮೊರೆ ಹೋಗಿರುವ ಬಂಟಿ ರಾವ್ ಇಂದಿನ ಯುವಜನತೆಗೆ ಪ್ರೇರಕ. ಇದುವರೆಗೂ 50 ಕ್ಕೂ ಹೆಚ್ಚು ಜೀವವನ್ನು ಉಳಿಸಿರುವ ಹೆಮ್ಮೆಯ ಬಂಟಿ ವೃತ್ತಿಯಾಚೆಗಿನ ಬದುಕಿಗೆ ಉದಾಹರಣೆ.
ಯಾರಾದರೂ ಮಾಯಾ ನಗರಿ ಮುಂಬಯಿಗೆ ಹೋದರೆ ಎರಡು ವಿಷಯವನ್ನು ಮರೆಯಬಾರದು. ಒಂದು ಕಡಲದಡದಲ್ಲಿ ಕಾಳಜಿವಹಿಸಿಕೊಳ್ಳುವುದು ಹಾಗೂ ಅಮೂಲ್ಯ ಜೀವರಕ್ಷಕ ಬಂಟಿಗೊಂದು ಧನ್ಯವಾದ ಹೇಳುವುದು. ಏನಂತೀರಿ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.