ಬೆಂಗಳೂರು: ನೆಲ, ಜಲ, ವಾಯು ಹೀಗೆ ಪರಿಸರ ಸಂರಕ್ಷಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅನೇಕ. ಸಂಘ ಸಂಸ್ಥೆಗಳು, ವ್ಯಕ್ತಿಗಳು, ವಿದ್ಯಾರ್ಥಿಗಳು ಒಂದಿಲ್ಲೊಂದು ರೀತಿಯಲ್ಲಿ ಪರಿಸರ ಪ್ರೇಮ ಮೆರೆಯುವುದನ್ನು ನಾವು ಕಂಡಿದ್ದೇವೆ. ಅದರ ಭಾಗವಾಗಿ ಬೆಂಗಳೂರಿನ ಒಂದು ಎನ್ಜಿಒ ಮರಕ್ಕೆ ಅಂಟಿಸಿರುವ ಜಾಹೀರಾತು ಕೀಳುವ (ತೆರವುಗೊಳಿಸುವ) ಅಪರೂಪದ ಕೆಲಸದ ಮೂಲಕ ಪರಿಸರ ಉಳಿಸಲು ಹೊರಟಿದೆ.
ಸೇವ್ ಗ್ರೀನ್ ಎಂಬುದೊಂದು ಎನ್ಜಿಒ. ಹೇಮಂತ್ ಇದರ ಸಂಸ್ಥಾಪಕರು. ಅವರು ವೃತ್ತಿಯಿಂದ ಕಂಪ್ಯೂಟರ್ ಸಾಫ್ಟವೇರ್ ಹಾಗೂ ಹಾರ್ಡ್ವೇರ್ ಸರ್ವೀಸರ್. ಬೆಂಗಳೂರಿನಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ಈ ಕೆಲಸ ಮಾಡುತ್ತದೆ ಸೇವ್ ಗ್ರೀನ್ ತಂಡ. ಈ ತಂಡದಲ್ಲಿ ಸಾಫ್ಟವೇರ್ ಎಂಜಿನಿಯರ್ಸ್, ವಿದ್ಯಾರ್ಥಿಗಳು, ನಾಗರಿಕರು ಹಾಗೂ ಇತರರೂ ಸೇರಿದಂತೆ 20 ಜನರಿದ್ದಾರೆ.
ಮರಕ್ಕೆ ಜಾಹೀರಾತು ಅಂಟಿಸುವುದರಿಂದ ಹಾಗೂ ಮರಗಳಿಗೆ ಮೊಳೆ ಹೊಡೆದು ಜಾಹೀರಾತನ್ನು ನೇತುಹಾಕುವ ಮೂಲಕ ಮರದ ಬೆಳವಣಿಗೆಗೂ ಅಡ್ಡಿಯುಂಟಾಗುತ್ತದೆ. ಅಲ್ಲದೇ ಅದು ನಗರದ ಸೌಂದರ್ಯವನ್ನು ಕುಂದಿಸುತ್ತದೆ ಎಂಬುದು ಈ ತಂಡದ ಅಭಿಪ್ರಾಯ.
ಇವರು ಕೇವಲ ಜಾಹೀರಾತು ಕೀಳುತ್ತಲೇ ಹೋಗುವುದಿಲ್ಲ. ಅದರೊಂದಿಗೆ ಜಾಹೀರಾತು ಏಜೆನ್ಸಿಗಳನ್ನು ಸಂಪರ್ಕಿಸಿ ಅವರಿಗೆ ಈ ಕುರಿತು ಜಾಗೃತಿಯನ್ನೂ ಮೂಡಿಸುತ್ತದೆ. ಈ ತಂಡಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಸಾಥ್ ನೀಡಿದ್ದು, ಮಹಾನಗರ ಪಾಲಿಕೆಯ ನಿಯಮ ಉಲ್ಲಂಘಿಸಿ ಜಾಹೀರಾತು ಅಂಟಿಸುವವರ ವಿರುದ್ಧ ನೋಟಿಸ್ ಕೂಡಾ ಪಾಲಿಕೆವತಿಯಿಂದ ನೀಡುವ ಕ್ರಮ ಕೈಗೊಳ್ಳಲಾಗುತ್ತದೆ.
ಇದುವರೆಗೂ ಹಳೆ ವಿಮಾನ ನಿಲ್ದಾಣ ರಸ್ತೆ, ದೊಮ್ಮಲೂರು, ನ್ಯೂ ತಿಪ್ಪಸಂದ್ರ, ಎಚ್ಎಎಲ್, ಇಂದಿರಾನಗರ, ಎಚ್ಆರ್ಎಸ್ ಲೇಔಟ್ ಹೀಗೆ ವಿವಿಧೆಡೆ ಮರಕ್ಕೆ ಅಂಟಿಸಿದ್ದ ಜಾಹೀರಾತನ್ನು ತೆಗೆಯಲಾಗಿದೆ.
ಕೇವಲ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುವ ಬದಲು, ಒಂದಿಷ್ಟು ಸಮಯವನ್ನು ಪರಿಸರದ ಒಳಿತಿಗಾಗಿ ಮೀಸಲಿಡಬೇಕು ಅನಿಸಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ಎಲ್ಲರಿಗಿಂತ ವಿಭಿನ್ನವಾಗಿ ನಾವು ಏನಾದರೂ ಸಾಧಿಸಬೇಕು ಎಂದು ಆಶಿಸಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ 33ರ ಹರೆಯದ ಹೇಮಂತ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.