ನವದೆಹಲಿ: ಬಾನುಲಿ ಒಂದು ಅದ್ಬುತ ಸಂವಹನ ಮಾಧ್ಯಮ. ಈ ಉದ್ಯಮದಲ್ಲಿರುವವರು ಇದನ್ನು ಸಕ್ರಿಯವಾಗಿ ಮತ್ತು ಕ್ರಿಯಾಶೀಲವಾಗಿ ನಿರ್ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವ ರೇಡಿಯೊ ದಿನದ ಅಂಗವಾಗಿ ಬಾನುಲಿ ಪ್ರಿಯರಿಗೆ ಮತ್ತು ಈ ಉದ್ಯಮದಲ್ಲಿ ನಿರತವಾಗಿರುವ ಎಲ್ಲರಿಗೂ ಶುಭ ಕೋರಿರುವ ಅವರು, ಸಂವಾದ, ಸಂವಹನ ಮತ್ತು ಕಲಿಕೆಗಾಗಿ ಇದು ವಿಸ್ಮಯಕಾರಿ ಮಾಧ್ಯಮವಾಗಿದೆ. ಮನ್ ಕಿ ಬಾತ್ ಮೂಲಕ ದೇಶದ ಜನರನ್ನು ಸಂಪರ್ಕಿಸಲು ರೇಡಿಯೊ ನೆರವಾಗಿದೆ ಎಂದು ಅವರು ಟ್ವಿಟರ್ನಲ್ಲಿ ಹೇಳಿದ್ದಾರೆ.
ಬಾನುಲಿಯಲ್ಲಿ ತಾವು ಪ್ರತಿ ತಿಂಗಳು ನಡೆಸಿಕೊಡುತ್ತಿರುವ ಮನ್ ಕಿ ಬಾತ್ ಕಾರ್ಯಕ್ರಮದ ಎಲ್ಲ ಕಂತುಗಳನ್ನು narendramodi.in/mann-ki-baat ಈ ಮೂಲಕ ಕೇಳಬಹುದಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಜಗತ್ತಿನ ಶೇ.95 ರಷ್ಟು ಜನರನ್ನು ತಲುಪಬಲ್ಲ ಅಪರೂಪದ ಸಮುದಾಯ ಧ್ವನಿ ರೆಡಿಯೊ. ಗ್ರಾಮಭಾರತದ ಪ್ರತಿನಿಧಿ ಹಾಗೂ ಜನರ ಆಶಯಗಳಿಗೆ ಪೂರಕವಾಗಿ ಸ್ಪಂದಿಸುವಲ್ಲಿ ಬಾನುಲಿಯ ಪಾತ್ರ ಬಹುಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಫೆ.13 ರಂದು ವಿಶ್ವ ರೆಡಿಯೋ ದಿನ ಆಚರಿಸಲಾಗುತ್ತಿದೆ.
ಪ್ರಧಾನಿ ಅವರ ಮನ್ಕಿ ಬಾತ್ ದೇಶದ ಶೇ.೯೯ ರಷ್ಟು ಜನರನ್ನು ತಲುಪಿದ್ದು, ಡಿಟಿಎಚ್, ಮೊಬೈಲ್ ಅಪ್ಲಿಕೇಶನ್ಸ್, ಸೆಟ್ಲೈಟ್ ಚಾನೆಲ್ಸ್ಗಳಲ್ಲಿಯೂ ಮನ್ಕಿ ಬಾತ್ ಕೇಳುವ ಅವಕಾಶ ಇದೆ ಎಂದು ಎಐಆರ್ ತಿಳಿಸಿದೆ.
ಪ್ರಧಾನಿ ಮೋದಿ ಅವರ ಮನ್ಕಿ ಬಾತ್ ಕಾರ್ಯಕ್ರಮವನ್ನು ಲಕ್ಷಾನುಗಟ್ಟಲೆ ಜನ ಕೇವಲ ಆಲಿಸುವುದಷ್ಟೇ ಅಲ್ಲ, ಈ ಕಾರ್ಯಕ್ರಮದ ಅವಧಿಯಲ್ಲಿ ಸಾಕಷ್ಟು ಜಾಹೀರಾತು ಮೂಲಕ ಆದಾಯವೂ ಗಣನೀಯವಾಗಿದೆ. 2015-16ರ ಅವಧಿಯಲ್ಲಿ ರೂ.4.78 ಕೋಟಿಗೂ ಹೆಚ್ಚು ಆದಾಯ ಬಂದಿದೆ ಎಂದು ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.