ಕಠ್ಮಂಡು: ಸುಮಾರು 7,800 ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಭೂಕಂಪದ ಕಹಿ ನೆನಪಿನಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನೇಪಾಳದ ಸಂತ್ರಸ್ಥರು ತಮ್ಮ ತಲೆಯನ್ನು ಬೋಳಿಸಿ, ಶ್ವೇತವಸ್ತ್ರ ಧರಿಸಿ ಗುರುವಾರ ಮಡಿದವರಿಗೆ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು.
ಭೂಕಂಪ ಸಂಭವಿಸಿ 13 ದಿನಗಳು ಆದ ಹಿನ್ನಲೆಯಲ್ಲಿ ಕಠ್ಮಂಡುವಿನಲ್ಲಿರುವ ಪ್ರಸಿದ್ಧ ಪಶುಪತಿನಾಥ ದೇವಾಲಯದಲ್ಲಿ ಭಾರೀ ಪ್ರಮಾಣದಲ್ಲಿ ಸೇರಿದ್ದ ಸಂತ್ರಸ್ಥರು ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ, ಪ್ರಾರ್ಥನೆಗಳನ್ನು ಸಲ್ಲಿಸಿ ದುರಂತದಲ್ಲಿ ಅಗಲಿದ ತಮ್ಮ ಬಂಧು ಮಿತ್ರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪುರುಷರು ಶ್ವೇತ ವಸ್ತ್ರಧರಿಸಿ, ತಲೆಯನ್ನು ಬೋಳಿಸಿದರೆ, ಮಹಿಳೆಯರು ತಲೆಯನ್ನು ಬಾಚದೆ ಪಶುಪತಿ ದೇಗುಲದಲ್ಲಿನ ಬಾಗ್ಮತಿ ನದಿ ತಟದಲ್ಲಿ ಪ್ರಾರ್ಥನೆ ಸಲ್ಲಿಸಿ ಮಡಿದವರಿಗೆ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು.
ಪ್ರೀತಿ ಪಾತ್ರರು, ಬಂಧುಗಳು ತೀರಿಕೊಂಡ 13 ದಿನಗಳಲ್ಲಿ ಪುಣ್ಯತಿಥಿ ನಡೆಸುವ ಸಂಪ್ರದಾಯ ಹಿಂದೂ ಪದ್ಧತಿಯಲ್ಲಿದೆ. ಈ ಹಿನ್ನಲೆಯಲ್ಲಿ ಸಾಮೂಹಿಕವಾಗಿ ಗುರುವಾರ ಪೂಜೆ ಪುನಸ್ಕಾರ ನೆರವೇರಿಸಲಾಯಿತು.
ಭೂಕಂಪದಿಂದಾಗಿ 7,800 ಮಂದಿ ಮೃತರಾಗಿದ್ದಾರೆ, 15 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 300,000 ಮನೆಗಳು ಧರೆಗುರುಳಿವೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.