ಫತ್ತೇಪೂರ್ ಸಿಕ್ರಿ (ಉತ್ತರ ಪ್ರದೇಶ): ಮದುವೆ ಆಗು ಅಂದ್ರೆ, ಇಲ್ಲೊಬ್ಬಳು ಎಲೆಕ್ಷನ್ಗೆ ನಿಂತಿದ್ದಾಳೆ. ಅದೂ 25 ವರ್ಷ ಯುವತಿ. ಮದುವೆ ಕನಸು ಕಾಣೋ ವಯಸ್ಸಲ್ಲಿ ಮದುವೆಯಿಂದ ತಪ್ಪಿಸಿಕೊಳ್ಳೋಕೆ ಹೀಗೆ ಮಾಡೋದೆ ? ಆದ್ರೆ ಅದ್ರಲ್ಲೂ ಅವ್ಳಿಗೆ ಸಾಮಾಜಿಕ ಕಳಕಳಿ ಇರೋದನ್ನ ಒಪ್ಲೇಬೇಕು ಬಿಡಿ.
ಕುತೂಹಲಕಾರಿ ನಿರ್ಣಯಕ್ಕೆ ಶರಣಹೋದ ಯುವತಿಯೇ ವಂದನಾ ಶರ್ಮಾ. ಫತ್ತೇಪುರ ಸಿಕ್ರಿಯ ಈಕೆ ರೈತನ ಮಗಳು. ಇದೀಗ ತನ್ನೂರ ಕ್ಷೇತ್ರದಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದು ಎಲ್ಲರ ಗಮನ ಸೆಳೆದಿದ್ದಾಳೆ.
ಆಗ್ರಾ ಕಾಲೇಜಿನಲ್ಲಿ ಪದವಿ ಪಡೆದಿರುವ ಈಕೆಗೆ ಮದುವೆ ಮಾಡಲು ಕುಟುಂಬದವರು ತಯಾರಿ ನಡೆಸಿದ್ದರು. ಆದರೆ ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂಬ ಕನಸಿನ ಯುವತಿ, ಮದುವೆಯನ್ನು ಹೇಗಾದರೂ ಮುಂದೂಡಲೇಬೇಕೆಂದು ಈ ಉಪಾಯಕ್ಕೆ ಮೊರೆಹೋಗಿದ್ದಾಳಂತೆ.
ತನ್ನೂರಿನ ಸಮೀಪ ಯಾವುದೇ ಶಾಲೆ, ಕಾಲೇಜುಗಳಿಲ್ಲ, ಅಲ್ಲದೇ ಮೂಲಭೂತ ಸೌಕರ್ಯಗಳೇ ಇರುವುದಿಲ್ಲ. ಸಂಜೆ 6 ಗಂಟೆಯ ನಂತರ ಗ್ರಾಮದ ಹೆಣ್ಣಮಕ್ಕಳು ಮನೆಯ ಪುರುಷರ ಸಹಾಯದೊಂದಿಗೇ ಅಡ್ಡಾಡಬೇಕು. 21ನೇ ಶತಮಾನದಲ್ಲೂ ಇಂಥ ಪರಿಸ್ಥಿತಿ ನಮ್ಮೂರಲ್ಲಿದೆ. ಆದ್ದರಿಂದ ಇವೆಲ್ಲ ಸಮಸ್ಯೆಗೂ ಸಾಧ್ಯವಾದಷ್ಟು ಪರಿಹಾರ ಒದಗಿಸಬೇಕೆಂಬ ಧ್ಯೇಯ ತನ್ನದು ಎಂದು ಅವಳು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾಳೆ.
ವಂದನಾ ಫಲಿತಾಂಶದ ಬಗ್ಗೆ ಆಕೆಗೆ ಚಿಂತೆ ಇಲ್ವಂತೆ. ಹಣ ಹಾಗೂ ತೋಳ್ಬಲದ ವಿರುದ್ಧ ಸ್ಪರ್ಧಿಸಿದ್ದೇನೆ ಎನ್ನುತ್ತಾಳೆ ಅವಳು. ಚುನಾವಣೆಗೆ ಸ್ಪರ್ಧಿಸುವ ವಂದನಾ ನಿರ್ಧಾರವನ್ನು ಕುಟುಂಬದವರು ಮೊದಲು ಒಪ್ಪಿರಲಿಲ್ಲ. ಆದರೆ, ಸಹೋದರ ಸುಶೀಲ್ ಆಕೆಗೆ ಸಾಥ್ ಕೊಟ್ಟಿದ್ದ. ಸ್ವತಂತ್ರವಾಗಿ ಸ್ಪರ್ಧಿಸಿರುವ, ಮದುವೆಗೆ ತಾತ್ಕಾಲಿಕ ಚಕ್ಕರ್ ಕೊಟ್ಟ ಅಪರೂಪದ ಯುವತಿ ವಂದನಾಗೆ ಮತದಾರ ಪ್ರಭು ಹೇಗೆ ಸ್ಪಂದಿಸುತ್ತಾನೋ ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.