ನವದೆಹಲಿ: ಭಾರತೀಯ ಮೂಲದ ಅಮೆರಿಕ ಪ್ರಜೆ ಡಾ.ಶಾವ್ನಾ ಪಾಂಡ್ಯಾ ಅವರು ಗಗನಯಾತ್ರೆಗೆ ಸಜ್ಜಾಗಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಭಾರತೀಯ ಮಹಿಳೆಯರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಇದೀಗ ಡಾ.ಶಾವ್ನಾ ಸೇರಿದ್ದಾರೆ.
32 ವರ್ಷದ ಶಾವ್ನಾ ಪ್ರಸ್ತುತ ಕೆನಡಾದಲ್ಲಿ ನೆಲೆಸಿದ್ದಾರೆ. ಶಾವ್ನಾ ಜನಿಸಿದ್ದು ಕೆನಡಾದಲ್ಲೇ ಆದರೂ ಅವರ ಪೋಷಕರು ಭಾರತೀಯರು. ಮುಂಬೈ ಮೂಲದ ಡಾ. ಶಾವ್ನಾ ಬಹುಮುಖ ಪ್ರತಿಭೆಯಾಗಿದ್ದಾರೆ. ಲೇಖಕಿ, ಗಾಯಕಿ, ಉದ್ಯಮಿ, ವೈದ್ಯೆ, ನರಶಾಸ್ತ್ರಜ್ಞೆ, ಅಂತಾರಾಷ್ಟ್ರೀಯ ಕೊರಿಯನ್ ಟೆಕ್ವಾಂಡೊ ಚಾಂಪಿಯನ್ ಕೂಡ ಆಗಿದ್ದಾರೆ.
ಮತ್ತೊಂದು ಪ್ರಮುಖ ಅಂಶವೆಂದರೆ ಶಾವ್ನಾ ಅಮೆರಿಕದ ಅತ್ಯುನ್ನತ ಸೈನಿಕ ಪಡೆ ನೇವಿ ಸೀಲ್ಸ್ನಿಂದ ತರಬೇತಿ ಪಡೆದ ಮುಯ್ ಥಾಯ್ ಪಟುವಾಗಿದ್ದಾರೆ. ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ 32 ವರ್ಷದ ಶಾವ್ನಾ 2018ರಲ್ಲಿ ಇತರೆ ಎಂಟು ಬಾಹ್ಯಾಕಾಶ ಯಾತ್ರಿಗಳ ತಂಡದೊಂದಿಗೆ ಬಾಹ್ಯಾಕಾಶ ಯಾನ ಆರಂಭಿಸಲಿದ್ದಾರೆ. ಅಮೆರಿಕದ ಸಿಟಿಜನ್ ಸೈನ್ಸ್ ಅಸ್ಟ್ರೋನಾಟ್, ಸಿಎಸ್ಎ ಯೋಜನೆಯಡಿ ಶಾವ್ನಾ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ.
ಈ ಬಗ್ಗೆ ಬಹಳ ಖುಷಿಯಿಂದಲೇ ಮಾತನಾಡುವ ಶಾವ್ನಾ, “ನಾನು 10 ವರ್ಷದ ಹುಡುಗಿಯಾಗಿದ್ದಾಗಾಲೇ ಬಾಹ್ಯಾಕಾಶದ ಕುರಿತಂತೆ ಸಾಕಷ್ಟು ಕುತೂಹಲವಿತ್ತು. ಚಿಕ್ಕಂದಿನಿಂದಲೂ ಬಾಹ್ಯಾಕಾಶ ಸಂಶೋಧನೆ, ಗಗನಯಾತ್ರೆಯ ಬಗ್ಗೆ ಕನಸು ಕಾಣುತ್ತಿದ್ದೆ” ಎಂದು ಹೇಳಿದ್ದಾರೆ. ಇನ್ನು ಶಾವ್ನಾ ಕುಟುಂಬಸ್ಥರು ಮುಂಬೈನಲ್ಲಿ ನೆಲೆಸಿದ್ದು, ಅಪರೂಪಕ್ಕೆ ಭಾರತಕ್ಕೆ ಬರುವ ಶಾವ್ನಾ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಹೋಗುತ್ತಿರುತ್ತಾರೆ.
ಅರ್ಜಿ ಸಲ್ಲಿಕೆ ಮಾಡಿದ್ದು ಬರೊಬ್ಬರಿ 3200 ಮಂದಿ ಆಯ್ಕೆಯಾಗಿದ್ದು ಕೇವಲ ಇಬ್ಬರು
ಇನ್ನು ಈ ಪ್ರತಿಷ್ಠಿತ ಗಗನಯಾನದಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತ ಸುಮಾರು 3200 ಮಂದಿ ಆಸಕ್ತರು ಅರ್ಜಿ ಸಲ್ಲಿಕೆ ಮಾಡಿದ್ದರಂತೆ. ಆದರೆ ಈ ಪೈಕಿ ಆಯ್ಕೆಯಾಗಿದ್ದು ಮಾತ್ರ ಇಬ್ಬರು. ಆ ಇಬ್ಬರಲ್ಲಿ ಭಾರತೀಯ ಮೂಲದ ಶಾವ್ನಾ ಪಾಂಡ್ಯಾ ಕೂಡ ಒಬ್ಬರು ಎನ್ನುವುದೇ ಹೆಮ್ಮೆಯ ಸಂಗತಿ.
ಹಲವು ಭಾಷೆ ಮತ್ತು ವಿಷಯಗಳಲ್ಲಿ ಪರಿಣತಿ ಹೊಂದಿರುವ ಶಾವ್ನಾ
ಯುನಿವರ್ಸಿಟಿ ಆಫ್ ಅಲ್ಬರ್ಟಾದಲ್ಲಿ ನ್ಯೂರೋಸೈನ್ಸ್ ವಿಷಯದಲ್ಲಿನಲ್ಲಿ ಬಿ.ಎಸ್ಸಿ ಪದವಿ ಪಡೆದ ಶಾವ್ನಾ, ಬಳಿಕ ಇಂಟರ್ನ್ಯಾಷನಲ್ ಸ್ಪೇಸ್ ಯುನಿವರ್ಸಿಟಿಯಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದಾರೆ. ಅದಾದ ಬಳಿಕ ಯುನಿವರ್ಸಿಟಿ ಆಫ್ ಅಲ್ಬರ್ಟಾದಲ್ಲಿ ಮೆಡಿಸಿನ್ನಲ್ಲಿ ಎಂಡಿ ಮಾಡಿದ್ದಾರೆ. ಫ್ರೆಂಚ್, ಸ್ಪಾನಿಶ್ ಮತ್ತು ರಷ್ಯನ್ ಭಾಷೆಯಲ್ಲೂ ಪ್ರಭುತ್ವ ಪಡೆದಿರುವ ಶಾವ್ನಾ, ಹ್ಯೂಸ್ಟನ್’ನ ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ ಮತ್ತು ಜರ್ಮನಿಯ ಕೋಲಿನ್ನ ಯುರೋಪಿಯನ್ ಅಸ್ಟ್ರೋನಟ್ ಸೆಂಟರ್ನಲ್ಲಿ ತರಬೇತಿ ಮತ್ತು ಸಂಶೋಧನೆಯನ್ನೂ ಕೈಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.