ನವದೆಹಲಿ: ವಿದೇಶದಲ್ಲಿರುವ ಭಾರತೀಯ ಕಂಪೆನಿಗಳಿಗೆ ಎಚ್-1ಬಿ ವೀಸಾ ಮೂಲಕ ಭಾರತೀಯ ಉದ್ಯೋಗಿಗಳನ್ನೇ ಬರಮಾಡಿಕೊಳ್ಳುವ ಬದಲು, ಅಲ್ಲಿನ ಸ್ಥಳೀಯರನ್ನೇ ಕೆಲಸಕ್ಕೆ ನೇಮಿಸಿಕೊಳ್ಳಿ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ.
ಇಂಗ್ಲೀಷ್ ಸುದ್ದಿವಾಹಿನಿಯೊಂದಕ್ಕೆ ಈ ಕುರಿತು ತಿಳಿಸಿರುವ ಅವರು, ಟ್ರಂಪ್ ಅವರ ವೀಸಾ ನಿರ್ಬಂಧ ನೀತಿಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಭಾರತೀಯ ಕಂಪೆನಿ ಕೆನಡಾದಲ್ಲಿದ್ದರೆ ಕೆನಡಾದಲ್ಲಿರುವ ಸ್ಥಳೀಯರಿಗೆ, ಅಮೆರಿಕಾದಲ್ಲಿದ್ದರೆ ಅಲ್ಲಿನ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಬೇಕು. ಅಂದಾಗ ಮಾತ್ರ ನಮ್ಮದು ಬಹುರಾಷ್ಟ್ರೀಯ ಕಂಪೆನಿ ಎನಿಸಿಕೊಳ್ಳುತ್ತದೆ ಎಂದಿದ್ದಾರೆ.
ನಿರ್ಬಂಧ ಹೇರುವ ಸಾಧ್ಯತೆ ಇರುವ ವೀಸಾದ ಮೂಲಕ ಭಾರತೀಯರನ್ನು ಅಮೆರಿಕಕ್ಕೆ ಕಳುಹಿಸುವುದನ್ನು ನಿಲ್ಲಿಸುವಂತೆ ಸಲಹೆ ನೀಡಿರುವ ಅವರು, ಬಹುಸಂಸ್ಕೃತಿಗೆ ನಾವು ಒಗ್ಗಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಹೊಸ ಕಾರ್ಯಕಾರಿ ಆದೇಶದ ಬಗ್ಗೆ ಅಲ್ಲಿನ ಭಾರತೀಯ ಕಂಪೆನಿಗಳಿಗೆ ಅಷ್ಟೊಂದು ಆತಂಕವೇಕೆ ಎಂದು ಕೇಳಿದಾಗ ಭಾರತೀಯ ಕಂಪೆನಿಗಳು ವಿದೇಶಿಗರೊಂದಿಗೆ ಕೆಲಸ ಮಾಡುವುದನ್ನು ಕಲಿಯಬೇಕು ಮತ್ತು ಇನ್ನಷ್ಟು ಬಹು ಸಂಸ್ಕೃತಿಗೆ ತೆರೆದುಕೊಳ್ಳುವ ಸವಾಲುಗಳಿರುತ್ತವೆ ಎಂದರು.
ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶಿತ ಹೆಚ್-1ಬಿ ವೀಸಾ ಕಾನೂನಿನ ಬಗ್ಗೆ ಅಮೆರಿಕಾದಲ್ಲಿರುವ ಭಾರತೀಯ ಕಂಪೆನಿಗಳಲ್ಲಿ ಆತಂಕ, ಕಳವಳ ಸೃಷ್ಟಿಸಿದೆ. ಅಲ್ಲದೆ ಇತ್ತೀಚೆಗೆ ಜಾರಿಗೆ ಬಂದ ಲೊಫ್ಗ್ರೆನ್ ಮಸೂದೆ ಹೆಚ್-1ಬಿ ವೀಸಾ ಹೊಂದಿರುವವರ ಕನಿಷ್ಠ ವೇತನವನ್ನು 60,000 ಅಮೆರಿಕಾ ಡಾಲರ್ ನಿಂದ 1,30,000 ಡಾಲರ್ ಗೆ ಹೆಚ್ಚಿಸಬೇಕೆಂದು ಕಾನೂನು ಜಾರಿಗೆ ತಂದದ್ದು ಕೂಡ ಆತಂಕವನ್ನು ಸೃಷ್ಟಿಸಿದೆ. ಇದರಿಂದ ನಿರ್ವಹಣಾ ವೆಚ್ಚ ಹೆಚ್ಚಾಗುವುದಲ್ಲದೆ ತಮಗೆ ಬೇಕಾದಂತೆ ಕುಶಲ ಕೆಲಸಗಾರರು ಸಿಗುವುದಿಲ್ಲ ಎಂಬ ಕಳವಳ ಭಾರತೀಯ ಕಂಪೆನಿಗಳದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.