ನವದೆಹಲಿ: ಮುಂದಿನ ಮೂರು ಓಲಂಪಿಕ್ಗೆ ಪೂರ್ವಭಾವಿಯಾಗಿ ಸರ್ಕಾರ ಕಾರ್ಯತತ್ಪರವಾಗಿದ್ದು, ಪ್ರಧಾನಿ ಮೋದಿ ಅವರ ಆಶಯದಂತೆ 8 ಜನ ಸದಸ್ಯರ ಟಾಸ್ಕ್ಫೋರ್ಸ್ ರಚಿಸಿದೆ. ಅದರಲ್ಲಿ ಬೀಜಿಂಗ್ ಗೇಮ್ನ ಸ್ವರ್ಣ ವಿಜೇತ ಶೂಟರ್ ಅಭಿನವ್ ಬಿಂದ್ರಾ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ್ ಗೋಪಿಚಂದ್ ಸ್ಥಾನ ಪಡೆದಿದ್ದಾರೆ.
ಕಳೆದ ರಿಯೊ ಓಲಂಪಿಕ್ಸ್ನಲ್ಲಿ ಭಾರತ ಕೇವಲ 2 ಪದಕಗಳನ್ನು ಪಡೆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು, 2020, 2024 ಹಾಗೂ 2028 ರ ಓಲಂಪಿಕ್ಸ್ನಲ್ಲಿ ಭಾರತ ಹೆಚ್ಚು ಪದಕ ಗೆಲ್ಲಲು ಯೋಜನೆಗಳನ್ನು ರೂಪಿಸುವ ಟಾಸ್ಕ್ಫೋರ್ಸ್ ರಚಿಸಲಾಗುವುದು ಎಂದು ಘೋಷಿಸಿದ್ದರು. ಭಾರತ ಹಾಕಿ ತಂಡದ ಮಾಜಿ ನಾಯಕ ವೀರೇನ್ ರಸ್ಕಿನಾ ಸಮಿತಿಯಲ್ಲಿರುವ ಇನ್ನೊಬ್ಬ ಮಾಜಿ ಕ್ರೀಡಾಪಟು.
ಸ್ಕೂಲ್ ಸ್ಪೋರ್ಟ್ಸ್ ಪ್ರಮೋಶನ್ ಬೋರ್ಡ್ನ ಮುಖ್ಯಸ್ಥ ಓಂ ಪಾಠಕ್, ಹಾಕಿ ಕೋಚ್ ಎಸ್.ಬಲದೇವ್ ಸಿಂಗ್, ಫರೀದಾಬಾದ್ನ ಮಾನವ್ ರಚನಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರೊಫೆಸರ್ ಜಿ.ಎಲ್.ಖನ್ನಾ, ಪತ್ರಕರ್ತ ರಾಜೇಶ್ ಕಾಲ್ರಾ ಮತ್ತು ಗುಜರಾತ್ ಕ್ರೀಡಾಪ್ರಾಧಿಕಾರದ ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್ ಟಾಸ್ಕ್ಫೋರ್ಸ್ನ ಇತರ ಐವರು ಸದಸ್ಯರು.
ಸಮಿತಿಯ ಅವಧಿ 3 ತಿಂಗಳು ಅಥವಾ ವರದಿ ಸಲ್ಲಿಸುವವರೆಗೆ ಇರಲಿದೆ ಎಂದು ಟಾಸ್ಕ್ಫೋರ್ಸ್ ಪ್ರಕಟಿಸುವ ವೇಳೆ ಕ್ರೀಡಾ ಸಚಿವ ವಿಜಯ್ ಗೋಯಲ್ ತಿಳಿಸಿದ್ದಾರೆ. ಸಂದೀಪ್ ಪ್ರಧಾನ ಸಮಿತಿಯ ಸಂಚಾಲಕರಾಗಿರುತ್ತಾರೆ.
ಮುಂಬರುವ 3 ಓಲಂಪಿಕ್ಸ್ಗಳಲ್ಲಿ ಭಾರತದಿಂದ ಅತ್ಯಧಿಕ ಸಂಖ್ಯೆಯಲ್ಲಿ ಕ್ರೀಡಾಳುಗಳು ಭಾಗವಹಿಸುವಂತಾಗಲು ಕಿರು, ಮಧ್ಯಮ ಹಾಗೂ ದೀರ್ಘಕಾಲಿಕ ಕ್ರಮ ರೂಪಿಸುವ ಕುರಿತು ಸಮಿತಿ ಸಲಹೆ ನೀಡಬೇಕಿದೆ. ವಿಶ್ವದರ್ಜೆಯ ತರಬೇತಿಗೆ ಅಗತ್ಯವಾದ ಅಂಶಗಳು, ಅಗತ್ಯವಾದ ಕ್ರೀಡಾ ಮೂಲ ಸೌಕರ್ಯಗಳ ಬಗ್ಗೆಯೂ ಸಮಿತಿ ಶಿಫಾರಸು ಸಲ್ಲಿಸಬೇಕು. ಈ ಶಿಫಾರಸುಗಳು ಓಲಂಪಿಕ್ಸ್ಗೆ ಮಾತ್ರವಲ್ಲದೆ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ಗೂ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.