ನವದೆಹಲಿ: ಅರೆಸೈನಿಕ ಸಿಬ್ಬಂದಿಗಳು ಸಾಮಾಜಿಕ ತಾಣ ಮತ್ತು ಮಾಧ್ಯಮ ವೇದಿಕೆಗಳ ಮೂಲಕ ಕುಂದುಕೊರತೆಗಳ ಪ್ರಸಾರ ಮಾಡುವುದನ್ನು ವಿರೋಧಿಸುತ್ತೇವೆ ಎಂದು ಕೇಂದ್ರೀಯ ಮೀಸಲು ಪೋಲಿಸ್ ಪಡೆಯ ಡೈರೆಕ್ಟರ್ ಜನರಲ್ ಕೆ. ದುರ್ಗಾ ಪ್ರಸಾದ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಸಿಆರ್ಪಿಎಫ್ನ ಡಿಜಿ ದುರ್ಗಾ ಪ್ರಸಾದ್ ಅವರು, ’ಇದು ಒಂದು ಕೆಟ್ಟ ಪ್ರವೃತ್ತಿಗೆ ಕಾರಣವಾಗುತ್ತದೆ. ಒಂದು ವೇಳೆ ನಾನು ಯಾರನ್ನಾದರೂ ವಜಾಗೊಳಿಸಿದರೆ ಅಥವಾ ಯಾರದೋ ವಿರುದ್ಧವಾಗಿ ಕ್ರಮತೆಗೆದುಕೊಂಡರೆ ಅವರು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ನಮ್ಮ ಮೇಲೆ ಒತ್ತಡ ತರಲು ಪ್ರಯತ್ನಿಸಬಹುದು. ಇದರಿಂದ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತದೆ. ಆದ್ದರಿಂದ ಇಂತಹ ತಂತ್ರಗಾರಿಕೆಗಳ ಪ್ರಚಾರವನ್ನು ಕೈಬಿಡುವಂತೆ ಮಾಧ್ಯಮಗಳಲ್ಲಿ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಸಿಆರ್ಪಿಎಫ್ ಕಾನ್ಸ್ಟೇಬಲ್ ಜೀತ್ ಸಿಂಗ್ ಸಿಆರ್ಪಿಎಫ್ ಸಿಬ್ಬಂದಿಗಳಿಗೆ ಸರಿಯಾದ ಸೌಲಭ್ಯ ಇಲ್ಲದಿರುವುದು ಮತ್ತು ಕೆಲಸದ ಪರಿಸ್ಥಿತಿಗಳ ಬಗ್ಗೆ ದೂರು ಮಾಡಿರುವ ವೀಡಿಯೋ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದು, ವೈರಲ್ ಆಗಿತ್ತು. ವೀಡಿಯೋದಲ್ಲಿ ಜೀತ್ ಸಿಂಗ್ ಪಿಂಚಣಿ, ವೈದ್ಯಕೀಯ ಸೌಲಭ್ಯ ಮತ್ತು ಸೇನೆಯ ರಜೆದಿನಗಳ ಬಗ್ಗೆ ಬೇಡಿಕೆಯಿರಿಸಿದ್ದರು.
ಜೀತ್ ಸಿಂಗ್ ದೂರಿಗೆ ಪ್ರತಿಕ್ರಿಯೆ ನೀಡಿದ ಸಿಆರ್ಪಿಎಫ್ನ ಡಿಜಿ ದುರ್ಗಾ ಪ್ರಸಾದ್, ಸಿಆರ್ಪಿಎಫ್ ಐಜಿ ಅವರು ಜೀತ್ ಸಿಂಗ್ ಜೊತೆ ಮಾತನಾಡಿದಾಗ ಜೀತ್ ಸಿಂಗ್ ಅವರಿಗೆ ಸೇನಾ ಪಡೆಯ ವಿರುದ್ಧ ಯಾವುದೇ ದೂರುಗಳಿಲ್ಲ ಆದರೆ ಸಾಮಾನ್ಯವಾಗಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಅಸಮಾಧಾನವಿದೆ ಎಂಬುದನ್ನಷ್ಟೇ ಹೇಳಿದ್ದಾರೆ ಎಂದರು.
ಜೀತ್ ಸಿಂಗ್ ಪ್ರಸ್ತಾಪಿಸಿದ ಸಮಸ್ಯೆಗಳ ಬಗ್ಗೆ 7th ಪೇ ಕಮಿಷನ್, ಸಿಎಪಿಎಫ್ ಸೇವಾ ವೇತನ ಮತ್ತು ಪಿಂಚಣಿಗಳ ಬಗ್ಗೆ ಕ್ರಮತೆಗೆದುಕೊಳ್ಳಲಾಗಿದೆ. ಸರಕಾರ ಅವುಗಳನ್ನು ಸುಧೀರ್ಘವಾಗಿ ಪರೀಶಿಲಿಸಿದೆ ಹಾಗೂ ಕೆಲ ಸೌಲಭ್ಯಗಳು ಈಗಾಗಲೇ ಜಾರಿಯಾಗಿವೆ ಇನ್ನೂ ಕೆಲವುಗಳನ್ನು ಪರೀಕ್ಷಿಸಲಾಗುತ್ತಿದೆ, ಎಂದು ಸಿಆರ್ಪಿಎಫ್ನ ಡಿಜಿ ದುರ್ಗಾ ಪ್ರಸಾದ್ ತಿಳಿಸಿದ್ದಾರೆ.
’ನಾವು ಮಾಡುತ್ತಿರುವ ಕೆಲಸವೇ ಅಂತಹದು. ಎಲ್ಲಿಂದೆಲ್ಲಿಗೋ ಸಂಚಾರ ಮಾಡುವ ಪರಿಸ್ಥಿತಿ ಇರುವುದರಿಂದ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಫೀಲ್ಡ್ನಲ್ಲಿರುವವರಿಗೆ ಎರಡು ತಿಂಗಳ ರಜೆ ನೀಡಲಾಗಿದೆ ಮತ್ತು ಅರ್ಹರಿರುವವರಿಗೆ ರಜೆಯನ್ನು ಪಡೆದೇ ಪಡೆಯುತ್ತಾರೆ ಎಂಬ ಭರವಸೆ ಇದೆ. ಹೀಗೆ ಅಂತ ಎಲ್ಲರಿಗೂ ಪ್ರತಿ ಹಬ್ಬಕ್ಕೂ ರಜೆ ಸಿಗುವುದಿಲ್ಲ’ ಎಂದು ಅವರು ಹೇಳಿದ್ದರು.
ದೂರು ನೀಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವುದರ ಪರ್ಯಾಯವಾಗಿ, ನಾವು ದೂರು ನಿವಾರಣಾ ವ್ಯವಸ್ಥೆಯನ್ನು ಪ್ರಾರಂಭಿಸಲಿದ್ದೇವೆ. ರಜೆ, ಸಾಲ, ಇನ್ನಿತರ ಸಮಸ್ಯೆಗಳನ್ನು ದೂರಿನ ಮೂಲಕ ಪ್ರತಿಯೊಬ್ಬರೂ ತನ್ನ ಸೆಲ್ ಫೋನ್ನಿಂದಲೇ ಮೇಲಧಿಕಾರಿಗಳಿಗೆ ದೂರನ್ನು ದಾಖಲಿಸುವಂತೆ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.