ನವದೆಹಲಿ : ತನ್ನ ಮಗನ ಕಾಯಿಲೆಯನ್ನು ಗುಣಪಡಿಸಲು ನೆರವಾಗಿ ಎಂದು ತಂದೆ ಮಾಡಿದ ಮನವಿಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ಪಂದಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರು ಜನರ ಪ್ರಧಾನಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ಮಗನ ಚಿಕಿತ್ಸೆಗಾಗಿ ನೆರವು ನೀಡಿ ಎಂದು ಗುಜರಾತಿನ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು, ಇದನ್ನು ತಕ್ಷಣವೇ ಮೋದಿ ಸ್ಪಂದಿಸಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ಏರ್ಪಾಡು ಮಾಡಲಾಗಿದೆ.
ಗುಜರಾತಿನ ಅಮ್ರೇಲಿ ಜಿಲ್ಲೆಯ 12 ವರ್ಷದ ಬಾಲಕ ಪಾರ್ಥ ಅಪರೂಪದ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ. ಪಾರ್ಥನ ತಂದೆ ತನ್ನ ಬಳಿಯಲ್ಲಿದ್ದ ಹಣ, ಆಸ್ತಿ, ಹೆಂಡತಿಯ ಒಡವೆಗಳನ್ನು ಮಾರಿದ್ದರೂ ಬಾಲಕ ಕಾಯಿಲೆ ಗುಣಪಡಿಸಲು ಸಾಧ್ಯವಾಗಲಿಲ್ಲ. ಮನನೊಂದ ತಂದೆ ಮಗನನ್ನು ಬದುಕಿಸಲು ಕೊನೆಯ ಪ್ರಯತ್ನ ಇದೊಂದೇ ಎಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಸಹಾಯವನ್ನು ಕೋರಿದ್ದರು.
ಈ ಪತ್ರಕ್ಕೆ ತಕ್ಷಣವೇ ಸ್ಪಂದಿಸಿದ ಪ್ರಧಾನಿ ಸಚಿವಾಲಯವು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪಾರ್ಥನಿಗೆ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದೆ.
ಪ್ರಧಾನಿಯವರ ನೆರವನ್ನು ನೆನೆದು ಪಾರ್ಥನ ತಂದೆ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 4 ತಿಂಗಳ ಹಿಂದೆ ಪ್ರಾರಂಭವಾಗಿದ್ದ ನನ್ನ ಮಗನ ಕಾಯಿಲೆ ಗುಣಪಡಿಸಲು ನಾನು ನನ್ನೆಲ್ಲಾ ಆಸ್ತಿ ಪಾಸ್ತಿಗಳನ್ನು ಮಾರಿ ಮಗನ ಆರೋಗ್ಯ ಸುಧಾರಿಸಲು ಬಹಳಷ್ಟು ಪ್ರಯತ್ನಪಟ್ಟೆ, ಆದರೆ ಇದ್ಯಾವುದೂ ನೆರವಾಗಲಿಲ್ಲ. ಹಣದ ಕೊರತೆಯಿಂದ ನಿರಾಶನಾಗಿದ್ದ ನನಗೆ ಪ್ರಧಾನಿ ಮೋದಿಯವರು ಖಂಡಿತವಾಗಿ ಸಹಾಯ ಮಾಡುತ್ತಾರೆ ಎಂಬ ನಂಬಿಕೆಯಿಂದ ಪ್ರಧಾನಿಯವರಿಗೆ ಪತ್ರ ಬರೆದಿದ್ದೆ. ಇದೀಗ ನನ್ನ ಮಗನಿಗೆ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ನಮಗೆ ಆರ್ಥಿಕವಾಗಿ ನೆರವು ನೀಡಿದ್ದಲ್ಲದೆ, ನೈತಿಕ ಬೆಂಬಲವನ್ನೂ ನೋಡಿದ್ದಾರೆ ಎಂದು ಪಾರ್ಥನ ತಂದೆ ಡಿಡಿ ನ್ಯೂಸ್ಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಪಾರ್ಥನು ಎಸ್ಎಸ್ಪಿಇ ಎಂಬ ಅಪರೂಪದ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ. ಇದೀಗ ಈತನಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೊಂದು ಅಪರೂಪದ ಕಾಯಿಲೆಯಾಗಿದ್ದು, ಅವಶ್ಯಕವಿರುವ ಎಲ್ಲಾ ಪರೀಕ್ಷೆಗಳನ್ನೂ ಮಾಡಲಾಗುತ್ತಿದೆ, ಚಿಕಿತ್ಸೆ ಪ್ರಾರಂಭಿಸಿದ್ದು ಪಾರ್ಥನ ಕಾಯಿಲೆ ಗುಣಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಏಮ್ಸ್ನ ವೈದ್ಯೆ ಡಾ. ಶೆಫಾಲಿ ಗುಲಾಟಿ ಹೇಳಿದ್ದಾರೆ.
ಸಹಾಯ ಕೋರಿ ಪತ್ರ ಬರೆದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸುತ್ತಿರುವುದು ಇದು ಮೊದಲನೇನಲ್ಲ. ಈ ಹಿಂದೆಯೂ ಬಹಳಷ್ಟು ಜನರು ವಿವಿಧ ರೀತಿಯ ನೆರವು ಕೇಳಿ ಪತ್ರ ಬರೆದಾಗ ಅವರ ಕಷ್ಟಕ್ಕೆ ಸ್ಪಂದಿಸಿ, ಅಗತ್ಯ ನೆರವು ನೀಡಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರೈಲ್ವೆ ಸಚಿವ ಸುರೇಶ್ ಪ್ರಭು ಸೇರಿದಂತೆ ಹಲವು ಸಚಿವರು ಸಾಮಾಜಿಕ ತಾಣಗಳಲ್ಲಿ ನೆರವು ಕೋರಿದವರಿಗೆ ಅಗತ್ಯ ನೆರವು ನೀಡುವ ಮೂಲಕ ಜನರ ಮನ ಗೆಲ್ಲುವ ಮೂಲಕ ಭರವಸೆ ಮೂಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.