ವಿಜಯವಾಡಾ: ಜಗತ್ತಿನಲ್ಲೇ ಅತ್ಯಂತ ದೊಡ್ಡ ಕೂಚಿಪುಡಿ ನೃತ್ಯವನ್ನು ವಿಜಯವಾಡಾದಲ್ಲಿ ಪ್ರದರ್ಶಿಸಲಾಯಿತು.
ವಿಜಯವಾಡಾದ ಇಂದಿರಾ ಗಾಂಧಿ ಮುನಿಸಿಪಲ್ ಸ್ಟೇಡಿಯಂನಲ್ಲಿ ನಡೆದ ‘ಮಹಾ ಬೃಂದ ನಾಟ್ಯಂ’ ಕೂಚಿಪುಡಿ ಪ್ರದರ್ಶನದಲ್ಲಿ 3 ರಿಂದ 65 ವಯಸ್ಸಿನವರನ್ನೊಳಗೊಂಡ ಒಟ್ಟು 6,117 ಕಲಾವಿದರು ಕೂಚಿಪುಡಿ ನೃತ್ಯವನ್ನು ಪ್ರದರ್ಶಿಸಿದರು. ಇದು ವಿಶ್ವದಲ್ಲೇ ಅತಿ ದೊಡ್ಡ ಕೂಚಿಪುಡಿ ಪ್ರದರ್ಶನವಾಗಿದ್ದು, ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಗೊಂಡಿದೆ.
ಮೂರು ದಿನಗಳ ಈ ಸಮಾರಂಭದಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ನೃತ್ಯಗಾರರು ತಮ್ಮ ಕುಚಿಪುಡಿ ನೃತ್ಯದ ತಾಳ ಹಾಗೂ ಶೈಲಿಯ ಮೂಲಕ ನೋಡುಗರನ್ನು ಸಮ್ಮೋಹನಗೊಳಿಸಿದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ಲೊಕೇಶ್ ಮತ್ತು ಮೊಮ್ಮಗ ದೆವಾಂಶರೊಂದಿಗೆ ಸಾಂಪ್ರದಾಯಿಕ ಉಡುಗೆಯಾದ ಪಂಚೆನ್ನು ಧರಿಸಿ ಸಮಾರಂಭಕ್ಕೆ ಆಗಮಿಸಿದ್ದರು. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಹಿರಿಯ ನೃತ್ಯಗಾರ್ತಿ ಯಾಮಿನಿ ಮೂರ್ತಿ, ಶೋಭಾ ನಾಯ್ಡು ಹಾಗೂ ಇನ್ನೂ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ದಾಖಲೆಯ ಪ್ರದರ್ಶನವನ್ನು ಯುಎಸ್ ಮೂಲದ ಸಿಲಿಕಾನ್ ಆಂಧ್ರ ಮತ್ತು ಆಂಧ್ರಪ್ರದೇಶ ಸರಕಾರದ ಭಾಷೆ ಮತ್ತು ಸಂಸ್ಕೃತಿ ಇಲಾಖೆಯು ಜಂಟಿಯಾಗಿ ಹಮ್ಮಿಕೊಂಡಿತ್ತು.
೧೬ ಬೇರೆ ಬೇರೆ ದೇಶಗಳಿಂದ ಕುಚಿಪುಡಿ ನೃತ್ಯಗಾರರು ಭಾಗವಹಿಸಿದ್ದರು. ಈ ಸಮಾವೇಶವನ್ನು ವೆಂಪತಿ ಚಿನಾ ಸತ್ಯಂ ಅವರ ಗೌರವಾರ್ಥವಾಗಿ ಏರ್ಪಡಿಸಲಾಗಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ‘ಆಂಧ್ರಪ್ರದೇಶ ಸರ್ಕಾರ ಕೂಚಿಪುಡಿ ನೃತ್ಯವನ್ನು ಪ್ರೋತ್ಸಾಹಿಸುತ್ತಿದ್ದು, ರಾಜ್ಯದ ಪ್ರತಿ ಕುಟುಂಬ ಕುಚಿಪುಡಿ ನೃತ್ಯ ಹಾಗೂ ಕಂಪ್ಯೂಟರ್ ಸಾಕ್ಷರತೆಗೆ ಪ್ರೋತ್ಸಾಹಿಸಬೇಕು’ ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಸರ್ಕಾರವು ರಾಜ್ಯದ ಎಲ್ಲ ಶಾಲೆಗಳಿಗೆ ಕೂಚಿಪುಡಿ ಶಿಕ್ಷಕರನ್ನು ನೇಮಿಸಿ 12,000 ಗೌರವಧನವನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.