ಬಾಳಾಸೋರ್: ಭಾರತ ದೇಶೀಯವಾಗಿ ನಿರ್ಮಿಸಿದ ಖಂಡಾಂತರ ಪರಮಾಣು ಅಣ್ವಸ್ತ್ರ ಕ್ಷಿಪಣಿ ಅಗ್ನಿ-5ನ್ನು ಸೋಮವಾರ ಪರೀಕ್ಷಾರ್ಥ ಯಶಸ್ವಿ ಉಡಾವಣೆ ಮಾಡಲಾಗಿದೆ.
ಒಡಿಶಾದ ಬಾಳಾಸೋರ್ ಜಿಲ್ಲೆಯ ಅಬ್ದುಲ್ ಕಲಾಂ (ವ್ಹೀಲರ್ ದ್ವೀಪ) ದ್ವೀಪದಿಂದ ಅಗ್ನಿ-5 ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ. ಇದು ಈ ಕ್ಷಿಪಣಿಯ 4ನೇ ಮತ್ತು ಅಂತಿಮ ಪರೀಕ್ಷಾರ್ಥ ಉಡಾವಣೆಯಾಗಿದೆ.
ಈ ವಿಧ್ವಂಸಕ ಕ್ಷಿಪಣಿಯನ್ನು ಇಂಟೀಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್)ನ ೪ನೇ ಸಂಕೀರ್ಣದಿಂದ ಮೊಬೈಲ್ ಲಾಂಚರ್ ಮೂಲಕ ಬೆಳಗ್ಗೆ 11.05ರ ವೇಳೆಗೆ ಉಡಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್ಡಿಒ) ತಯಾರಿಸಿದ ಅಗ್ನಿ-5 ಕ್ಷಿಪಣಿ ನಿಖರ ಮತ್ತು ನಿರ್ದಿಷ್ಟ ಗುರಿ ತಲುಪುವ ಮೂಲಕ ಉಡಾವಣೆ ಯಶಸ್ವಿಗೊಂಡಿದೆ. ಈ ಖಂಡಾಂತರ ಕ್ಷಿಪಣಿ ಪಾಕಿಸ್ಥಾನ, ಉತ್ತರ ಚೀನಾದ ಬಹುತೇಕ ಭಾಗಗಳು ಸೇರಿದಂತೆ ಏಷ್ಯಾದ ಯಾವುದೇ ಪ್ರದೇಶ, ಆಫ್ರಿಕಾ ಮತ್ತು ಯೂರೋಪ್ನ ಭಾಗಗಳನ್ನು ಗುರಿಯಾಗಿಸುವ ಸಾಮರ್ಥ್ಯ ಹೊಂದಿದೆ.
17 ಮೀಟರ್ ಉದ್ದ, 2 ಮೀ. ಅಗಲ ಮತ್ತು 50 ಟನ್ ತೂಕದ ಅಗ್ನಿ- 5 ಕ್ಷಿಪಣಿ, ಸುಮಾರು 1.5 ಟನ್ ಭಾರದ ಶಸ್ತ್ರಾಸ್ತ್ರವನ್ನು ಹೊತೊಯ್ಯುವ ಸಾಮರ್ಥ್ಯ ಹೊಂದಿದೆ. ಇದಕ್ಕೆ 5 ಸಾವಿರ ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸುವ ಸಾಮರ್ಥ್ಯವಿದೆ.
ಅಗ್ನಿ-5 ಕ್ಷಿಪಣಿ ಭಾರತೀಯ ಸೇನೆ ಸೇರ್ಪಡೆಗೊಂಡಲ್ಲಿ ಭಾರತವು ಅತ್ಯಾಧುನಿಕ ನಾವ್ಯೀನ್ಯತೆಯ ಖಂಡಾಂತರ ಕ್ಷಿಪಣಿಗಳನ್ನು ಹೊಂದಿದ ಅಮೇರಿಕಾ, ಫ್ರಾನ್ಸ್, ಚೀನಾ, ರಷ್ಯಾ ಮತ್ತು ಬ್ರಿಟನ್ ದೇಶಗಳ ಪಟ್ಟಿಗೆ ಸೇರಲಿದೆ.
ಅಗ್ನಿ- 5 ಯಶಸ್ಸಿಗೆ ಡಿಆರ್ಡಿಒ ಮತ್ತು ಅದರ ವಿಜ್ಞಾನಿಗಳಿಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದು ನಮ್ಮ ಸೇನೆಗೆ ಹೆಚ್ಚಿನ ಶಕ್ತಿಯನ್ನು ಒದಗಿಸಲಿದೆ. ದೇಶದ ಯುದ್ಧ ತಂತ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.
ಅಗ್ನಿ 5 ಯಶಸ್ವಿ ಉಡಾವಣೆ ಡಿಆರ್ಡಿಒ ಮತ್ತು ಅದರ ವಿಜ್ಞಾನಿಗಳ ಕಠಿಣಪರಿಶ್ರಮದ ಫಲವಾಗಿದೆ. ಈ ಸಂದರ್ಭದಲ್ಲಿ ನಾನು ಅವರಿಗೆ ಶುಭಾಶಯ ಕೋರುತ್ತೇನೆ ಎಂದು ಹೇಳಿದ್ದಾರೆ.
ಡಿಆರ್ಡಿಒದ ಈ ಯಶಸ್ಸಿಗೆ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಇದು ನಮ್ಮ ಯುದ್ಧ ತಂತ್ರಗಳು ಮತ್ತು ವೈರಿಗಳನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಡಿಆರ್ಡಿಒ ಯಶಸ್ಸಿಗೆ ಶುಭಾಶಯ ಕೋರಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಇದು ಭಾರತದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.