ನವದೆಹಲಿ : ಪಾಕಿಸ್ಥಾನದ ಜೈಲಿನಲ್ಲಿ ಬಂಧಿಯಾಗಿ ಸಾವನ್ನಪ್ಪಿದ್ದ ಭಾರತೀಯ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಸುಮಾರು 23 ವರ್ಷಗಳ ಕಾಲ ಪಾಕಿಸ್ಥಾನದ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ 2013 ರಲ್ಲಿ ಪಾಕಿಸ್ಥಾನದ ಜೈಲಿನಲ್ಲಿ ಸಾವನ್ನಪ್ಪಿದ್ದರು. ಅವರಿಗಾಗಿ ದಶಕಗಳ ಕಾಲ ಹೋರಾಟ ಮಾಡಿದ್ದ ಅವರ ಸಹೋದರಿ ದಲ್ಬೀರ್ ಕೌರ್ ಅವರು ಭಾನುವಾರ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
2005 ರಿಂದಲೇ ಅವರು ಬಿಜೆಪಿ ಪಕ್ಷಕ್ಕೆ ಸನಿಹವಾಗಿದ್ದರು. ಪಾಕಿಸ್ಥಾನದ ಜೈಲಿನಲ್ಲಿದ್ದ ಅವರ ಸಹೋದರ ಸರಬ್ಜಿತ್ ಸಿಂಗ್ ಬಿಡುಗಡೆಗಾಗಿ ದಲ್ಬೀರ್ ಕೌರ್ ನಡೆಸಿದ್ದ ವಿವಿಧ ಪ್ರತಿಭಟನೆಗಳಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು ಎನ್ನಲಾಗಿದೆ.
ಪಂಜಾಬ್ ಪ್ರಾಂತ್ಯದ ಬಿಜೆಪಿ ಶಾಸಕ ಹಾಗೂ ಸಚಿವ ಸುರ್ಜಿತ್ ಜ್ಯಾನಿ ಅವರ ಸಮ್ಮುಖದಲ್ಲಿ ಕಿಸಾನ್ ಮೋರ್ಚಾದ ಕಾರ್ಯಕ್ರಮದಲ್ಲಿ ದಲ್ಬೀರ್ ಕೌರ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಭಾರತದ ಗಡಿ ದಾಟಿ ಪಾಕಿಸ್ಥಾನಕ್ಕೆ ಹೋಗಿದ್ದ ಭಾರತದ ಸರಬ್ಜಿತ್ ಸಿಂಗ್ ಅವರನ್ನು ಪಾಕಿಸ್ಥಾನದ ಸೇನಾ ಪಡೆಗಳು ಬಂಧಿಸಿದ್ದು, ಪಾಕಿಸ್ಥಾನದ ವಿರುದ್ಧ ಗೂಢಾಚಾರ ಮತ್ತು ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲೂ ಸರಬ್ಜಿತ್ ಸಿಂಗ್ ಕೈವಾಡವಿದೆ ಎಂದು ಆರೋಪಿಸಿ ಪಾಕಿಸ್ಥಾನವು 1991 ರಲ್ಲಿ ಸರಬ್ಜಿತ್ ಸಿಂಗ್ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ಭಾರತ ಸರ್ಕಾರದ ಒತ್ತಡ ಮತ್ತು ವಿವಿಧ ಕಾರಣಗಳಿಂದಾಗಿ ಗಲ್ಲು ಶಿಕ್ಷೆಯನ್ನು 2008 ರವರೆಗೂ ಮುಂದೂಡುತ್ತಾ ಬಂದಿತ್ತು. ಆದರೆ 2013 ರ ಏಪ್ರಿಲ್ ತಿಂಗಳಲ್ಲಿ ಲಾಹೋರ್ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ ಅವರ ಮೇಲೆ ಸಹ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ತದನಂತರ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸರಬ್ಜಿತ್ ಸಿಂಗ್ ಸಾವನ್ನಪ್ಪಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.