ನವದೆಹಲಿ : ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆ 71ನೇ ಮಹಾ ಅಧಿವೇಶನದಲ್ಲಿ ಮಾಡಿರುವ ಭಾಷಣದ ವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆಯನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.
ಪಾಕಿಸ್ಥಾನಕ್ಕೆ ಖಡಕ್ ಸಂದೇಶ ನೀಡಿ, ದೃಢ ಮತ್ತು ಪರಿಣಾಮಕಾರಿಯಾದ ವಿಷಯಗಳನ್ನು ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾಗತಿಕ ಸಮಸ್ಯೆಗಳನ್ನು ವಿಶ್ವದೆದುರು ಚರ್ಚಿಸುವಲ್ಲಿ ಯಶಸ್ವಿಯಾದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಅವರು ಭಾಷಣದ ಮೊದಲ ಹಂತದಲ್ಲಿ ಕಳೆದ ಎರಡು ವರ್ಷದಲ್ಲಿ ಭಾರತ ಸರ್ಕಾರದ ಸಾಧನೆ, ಕಾರ್ಯವೈಖರಿಯನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಂಕ್ಷಿಪ್ತವಾಗಿ ತಿಳಿಸಿದರು.
ನಂತರ ಪಾಕಿಸ್ಥಾನದೊಂದಿಗೆ ಸ್ನೇಹ ಸಂಬಂಧವನ್ನು ಬಯಸಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಸೇರಿದಂತೆ ಪಾಕ್ನೊಂದಿಗಿನ ಸೌಹಾರ್ದತೆ ಕಾಯ್ದುಕೊಳ್ಳಲು ಭಾರತವು ನಡೆಸುತ್ತಿರುವ ಪ್ರಯತ್ನಗಳು, ಆದರೆ ಅದಕ್ಕೆ ಪ್ರತಿಫಲವಾಗಿ ಭಾರತಕ್ಕೆ ಸಿಗುತ್ತಿರುವ ಭಯೋತ್ಪಾದಕ ದಾಳಿ ಇವುಗಳನ್ನು ಅಚ್ಚುಕಟ್ಟಾಗಿ ವಿಶ್ವಸಮುದಾಯದ ಪ್ರಮುಖರೆದುರು ತೆರೆದಿಟ್ಟರು.
ಭಯೋತ್ಪಾದನೆ ಇಂದು ವಿಶ್ವಕ್ಕೇ ತಲೆನೋವಾಗಿ ಪರಿಣಮಿಸಿದ್ದು, ಇದರ ವಿರುದ್ಧ ಹೋರಾಡಲು ಇಡೀ ವಿಶ್ವವೇ ಒಂದಾಗಬೇಕಿದೆ. ಇದನ್ನು ವಿರೋಧಿಸುವವರನ್ನು ಪ್ರತ್ಯೇಕಿಸಿಡಬೇಕಾಗಿದೆ ಎಂದು ಭಯೋತ್ಪಾದನೆಯ ವಿರುದ್ಧ ಸಮರಕ್ಕೆ ಕರೆ ನೀಡಿದರು. ವಿಶ್ವಸಮುದಾಯದೆದುರು ಪಾಕಿಸ್ಥಾನದ ಬಣ್ಣವನ್ನು ಬಯಲು ಮಾಡಿದ ಸುಷ್ಮಾ ಸ್ವರಾಜ್ ಅವರ ಭಾಷಣದಿಂದ ಪ್ರಧಾನಿ ನರೇಂದ್ರ ಮೋದಿಯವರು ಸಂತಸರಾಗಿದ್ದು, ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.