ರಿಯೋ ಡಿ ಜನೈರೊ: ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಮಹಿಳಾ ವಿಭಾಗದ ಶಾಟ್ಪುಟ್ ಎಫ್-53ರಲ್ಲಿ ದೀಪಾ ಮಲಿಕ್ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಅಥ್ಲೀಟ್ ಪದಕ ಗೆದ್ದು ಸಾಧನೆ ಮಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಇದುವರೆಗೆ ಭಾರತ 3 ಪದಕ ಗೆದ್ದಂತಾಗಿದೆ.
ಹರಿಯಾಣದ ದೀಪಾ ಮಲಿಕ್ ಮಹಿಳಾ ವಿಭಾಗದ ಶಾಟ್ಪುಟ್ ಎಫ್-53ರಲ್ಲಿ 4.61 ಮೀ. ದೂರ ಎಸೆಯುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾದರು. ಮೊದಲ ಪ್ರಯತ್ನದಲ್ಲಿ 4.26 ಮೀ., ಎರಡನೇ ಪ್ರಯತ್ನದಲ್ಲಿ 4.49 ಮೀ. ತದನಂತರ 4.41 ಮೀ. ಉತ್ತಮ ಎಸೆತ 4.61 ಮೀ. ಮಾಡಿ ಪದಕ ಗೆದ್ದು ಸಂಭ್ರಮಿಸಿದ್ದಾರೆ.
ಪದಕ ಗೆಲ್ಲುವ ಮೂಲಕ ಜೀವನದ ಮಹತ್ವಾಕಾಂಕ್ಷೆಯನ್ನು ಪೂರೈಸಿದಂತಾಗಿದೆ. ಇದಕ್ಕಾಗಿ ಇದುವರೆಗೆ ನಾನು ನಡೆಸಿದ್ದ ಸಿದ್ಧತೆಗಳು ಉತ್ತಮವಾಗಿತ್ತು, ಈ ವರ್ಷ ಜುಲೈ ತಿಂಗಳಲ್ಲಿ ಇನ್ನಷ್ಟು ಸುಧಾರಿತ ಪ್ರಯೋಗಗಳಿಂದಾಗಿ ರಿಯೋದಲ್ಲಿ ಉತ್ತಮ ಪ್ರದರ್ಶನ ನೀಡುವಂತಾಯಿತು. ಪದಕ ಗೆದ್ದಿದ್ದು ಅತ್ಯಂತ ತೃಪ್ತಿ ತಂದಿದೆ. ನನ್ನನ್ನು ಇಷ್ಟು ವರ್ಷಗಳವರೆಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಇದು ರಿಯೋದಲ್ಲಿ ಭಾರತೀಯರು ಗೆದ್ದ 3 ನೇ ಪದಕ. ಭಾರತದಲ್ಲಿ ಇದರಿಂದಾಗಿ ಪ್ಯಾರಾ ಕ್ರೀಡೆಗಳನ್ನು ಇನ್ನಷ್ಟು ಪ್ರೋತ್ಸಾಹಿಸುವಂತಾಗಲಿ ಎಂದು ದೀಪಾ ಹೇಳಿದರು.
ಹರಿಯಾಣದ ಸೋನೆಪತ್ನವರಾದ ದೀಪಾ ಮಲಿಕ್ ಅವರಿಗೆ 45 ವರ್ಷ. 1999 ರಲ್ಲಿ ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳದೆ ಸುಮಾರು 31 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಇದರಿಂದಾಗಿ ದೀಪಾ ಅವರ ಮೈಮೇಲೆ ಒಟ್ಟು 183 ಹೋಲಿಗೆಗಳು ಬೀಳುವಂತಾಯಿತು. 6 ವರ್ಷಗಳ ಕಾಲ ವ್ಹೀಲ್ ಚೇರ್ ಮೇಲೆ ಇರುವಂತಾಗಿ ಪ್ಯಾರಾ ಕ್ರೀಡಾರ್ಥಿಯಾದರು. ಇಷ್ಟು ನೋವುಂಡರೂ ತಮ್ಮ ಛಲ ಬಿಡದೆ ಇಂದು ದೀಪಾ ಅವರು ಮಹಾನ್ ಸಾಧಕಿಯಾಗಿದ್ದಾರೆ.
ಬಹುಮುಖ ಪ್ರತಿಭೆಯಾಗಿರುವ ದೀಪಾ ಅವರು ಜಾವೆಲಿನ್, ಸ್ವಿಮ್ಮಿಂಗ್, ಮೋಟಾರ್ ಸೈಕ್ಲಿಂಗ್, ಡಿಸ್ಕಸ್ ಥ್ರೋಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಜಾವೆಲಿನ್ ಎಫ್ – 53 ರಲ್ಲಿ ಏಷ್ಯನ್ ದಾಖಲೆ ಮಾಡಿದ್ದು, ಡಿಸ್ಕಸ್, ಜಾವೆಲಿನ್, ಶಾಟ್ಪುಟ್ ಎಫ್-53ರಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಎಸ್-1 ಈಜಿನಲ್ಲೂ 3 ರಾಷ್ಟ್ರೀಯ ದಾಖಲೆಗಳನ್ನು ಮಾಡಿ, 2011 ರ ವಿಶ್ವ ಚಾಂಪಿಯನ್ಶಿಪ್ ಅಂಗವಿಕಲರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 2008 ರಲ್ಲಿ ಯಮುನಾ ನದಿಯಲ್ಲಿ ಈಜಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ. 2013 ರಲ್ಲಿ ಸ್ಪೆಷಲ್ ಬೈಕ್ ರೈಡ್ ಮೂಲಕ 58 ಕಿ.ಮೀ. ಕ್ರಮಿಸಿ ದಾಖಲೆ ಬರೆದಿದ್ದಾರೆ. ಅವರು ಭಾಗವಹಿಸಿರುವ ರಾಷ್ಟ್ರೀಯ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಇದುವರೆಗೆ ಒಟ್ಟು 47 ಚಿನ್ನ, 5 ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದಿದ್ದಾರೆ. ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೀಪಾ ಅವರದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.