ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮಸೂದೆ ಜಾರಿಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಶುಕ್ರವಾರ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸರಕು ಮತ್ತು ಜಿಎಸ್ಟಿ ಮಸೂದೆ ಮಂಡಿಸಲು ಮುಂದಾದಾಗ ಪ್ರತಿ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ‘ಕೇಂದ್ರ ಸರ್ಕಾರ ‘ಜಿಎಸ್ಟಿ’ಯನ್ನು ಬಲವಂತವಾಗಿ ಹೇರಲು ಹೊರಟಿದ್ದು, ಇದಕ್ಕೆ ಅಸಮ್ಮತಿ ಸೂಚಿಸಿರುವ ರಾಜ್ಯಗಳ ಬಾಯಿ ಮುಚ್ಚಿಸಲು ಹೊರಟಿದೆ’ ಎಂದು ವಿರೋಧ ಪಕ್ಷಗಳ ಸದಸ್ಯರುಗಳು ಆರೋಪಿಸಿದರು.
‘ಜಿಎಸ್ಟಿ ಜಾರಿಯಾದರೆ, ಸದ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಕುಗಳಿಗೆ ಮತ್ತು ಸೇವೆಗಳಿಗೆ ವಿಧಿಸುತ್ತಿರುವ ಎಲ್ಲ ರೀತಿಯ ಪರೋಕ್ಷ ತೆರಿಗೆ ರದ್ದಾಗಿ, ಅದರ ಬದಲು ಏಕರೂಪದ ಈ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಇದೊಂದು ಸಮಗ್ರ ತೆರಿಗೆ ವ್ಯವಸ್ಥೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೂ ಲಾಭವಿದೆ. ಭಯ ಪಡುವ ಅಗತ್ಯ ಇಲ್ಲ’ ಎಂದು ಜೇಟ್ಲಿ ಮನವೊಲಿಸಲು ಪ್ರಯತ್ನಿಸಿದರು. ಆದರೆ, ವಿರೋಧ ಪಕ್ಷಗಳು ಇದನ್ನು ಒಪ್ಪಲಿಲ್ಲ.
ಜಿಎಸ್ಟಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸ್ಥಾಯಿ ಸಮಿತಿಗೆ ವರ್ಗಾಯಿಸಬೇಕೆಂಬ ಮನವಿಯನ್ನು ಸ್ಪೀಕರ್ ತಳ್ಳಿಹಾಕಿದ್ದರಿಂದ ಕಾಂಗ್ರೆಸ್, ಟಿಎಂಸಿ, ಎನ್ಪಿಸಿ ಮತ್ತು ಎಡಪಕ್ಷಗಳು ಸಭಾತ್ಯಾಗ ಮಾಡಿದವು. ಎಐಎಡಿಎಂಕೆ ಮತ್ತು ಬಿಜೆಡಿ ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದವು ಆದರೆ, ಸಭಾತ್ಯಾಗ ಮಾಡಲಿಲ್ಲ.
ತಿದ್ದುಪಡಿ ಮಸೂದೆ ಜಾರಿಯಾಗಬೇಕಾದರೆ ಸಂಸತ್ತಿನ ಮೂರನೇ ಎರಡರಷ್ಟು ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.