ನವದೆಹಲಿ: 7ನೇ ವೇತನಾ ಆಯೋಗದ ಶಿಫಾರಸ್ಸುಗಳ ಬಗ್ಗೆ ಕಾರ್ಯದರ್ಶಿಗಳ ಮಂಡಳಿ ರಚಿಸಿದ ಅಂತಿಮ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರಿ ಉದ್ಯೋಗಿಗಳ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ.
ವೇತನದಲ್ಲಿ ಹೆಚ್ಚಳ ಮತ್ತು ಸರ್ಕಾರಿ ಉದ್ಯೋಗಿಗಳ ಪಿಂಚಣಿ ಹೆಚ್ಚಳಕ್ಕೆ ಕೇಂದ್ರ ಸಮ್ಮತಿ ಸೂಚಿಸಿದ್ದು, ಒಟ್ಟಾರೆಯಾಗಿ ವೇತನದಲ್ಲಿ ಶೇ. 23.55 ರಷ್ಟು ಹೆಚ್ಚಳವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಮಿತಿ ಶಿಫಾರಸ್ಸಿನಂತೆ ವೇತನಾ, ಭತ್ಯೆ, ಪಿಂಚಣಿಯಲ್ಲೂ ಶೇ 23.55ರಷ್ಟು ಏರಿಕೆಯಾಗಿದೆ. ಈ ಮೂಲಕ ಭಾರತೀಯ ಸೇನಾ ಸಿಬ್ಬಂದಿ ವೇತನ 21,000 ದಿಂದ 31,500 ಕ್ಕೆ ಏರಿಕೆಯಾಗಿದೆ.
ಸರ್ಕಾರಿ ಉದ್ಯೋಗಿಗಳ ಗ್ರಾಚ್ಯುವಿಟಿ ಸೀಲಿಂಗ್ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಯಾಗಲಿದೆ. ಜನವರಿ 1 ರಿಂದ ವೇತನ ಪರಿಷ್ಕರಣೆ ಅನ್ವಯವಾಗಲಿದೆ. 50 ಲಕ್ಷ ಉದ್ಯೋಗಿಗಳು, 58 ಲಕ್ಷ ಪಿಂಚಣಿದಾರರು ಇದರ ಫಲಾನುಭವಿಗಳಾಗಿದ್ದಾರೆ.
ಸರ್ಕಾರಿ ನೌಕರರ ಕನಿಷ್ಠ ವೇತನ ಈ ಹಿಂದಿನ 7,000 ಬದಲು 18,000ಕ್ಕೆ ನಿಗದಿಪಡಿಸುವಂತೆ ಸೂಚಿಸಲಾಗಿದೆ. ಹೊಸದಾಗಿ ಸೇರುವ ನೌಕರರಿಗೆ ಗರಿಷ್ಠ 2,25,000 ಹಾಗೂ ಸಂಪುಟ ಕಾರ್ಯದರ್ಶಿಗಳು ಮತ್ತಿತರರಿಗೆ 2,50,000 ನಿಗದಿಪಡಿಸಲಾಗಿದೆ.
ನಿವೃತ್ತ ನ್ಯಾಯಾಧೀಶ ಎ.ಕೆ. ಮಾಥುರ್ ನೇತೃತ್ವದ ವೇತನ ಆಯೋಗ ಹಣಕಾಸು ಸಚಿವರುಣ್ ಜೇಟ್ಲಿ ಅವರಿಗೆ 900 ಪುಟಗಳ ವರದಿ ಸಲ್ಲಿಸಿದ್ದು, ಕೇಂದ್ರ ಸರ್ಕಾರ ವೇತನ ಆಯೋಗದ ಶಿಫಾರಸ್ಸು ಪ್ರಕ್ರಿಯೆಗೆ ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದರಂತೆ ಕೇಂದ್ರ ಸಂಪುಟ ವೇತನ ಆಯೋಗದ ಶಿಫಾರಸ್ಸಿಗೆ ಅನುಮೋದನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.