ನವದೆಹಲಿ: ದೇಶದಾದ್ಯಂತ ಅಂತರ್ಜಾಲ ಸ್ವಾತಂತ್ರ್ಯ(ನೆಟ್ ನ್ಯೂಟ್ರಾಲಿಟಿ)ಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾಥ್ ನೀಡಿದ್ದು, ಈ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಅಂತರ್ಜಾಲ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸರ್ಕಾರ ತಟಸ್ಥ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿದ ಅದರು, ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಿ ಕೂಡಲೇ ಚರ್ಚೆಗೆ ಅವಕಾಶ ನೀಡಬೇಕು, ನಿಲುವಳಿ ಸೂಚನೆ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ತಟಸ್ಥ ಧೋರಣೆಯ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಬೇಕು ಎಂದು ಅವರು ಹೇಳಿದರು.
ದೂರಸಂಪರ್ಕ ಸಂಸ್ಥೆ ಭಾರ್ತಿ ಏರ್ಟೆಲ್ ಈಚೆಗೆ ‘ಏರ್ಟೆಲ್ ಝೀರೊ’ ಎಂಬ ವ್ಯವಸ್ಥೆಗೆ ಚಾಲನೆ ನೀಡಿದ ನಂತರ ಅಂತರ್ಜಾಲ ಸ್ವಾತಂತ್ರ್ಯದ ಚರ್ಚೆ ಆರಂಭ ಗೊಂಡಿತ್ತು. ಈ ವ್ಯವಸ್ಥೆಯ ಪ್ರಕಾರ ಕೆಲವು ನಿರ್ದಿಷ್ಟ ಆಪ್ಗಳು ಉಚಿತವಾಗಿ ಲಭ್ಯವಾಗಲಿವೆ. ಅದರ ಶುಲ್ಕವನ್ನು ಆಪ್ ತಯಾರಿಸಿದ ಸಂಸ್ಥೆಗಳೇ ಭರಿಸುತ್ತವೆ. ಆದರೆ, ಈ ಕ್ರಮ ಕೆಲವೇ ಕೆಲವರ ಏಕಸ್ವಾಮ್ಯಕ್ಕೆ ಕಾರಣವಾಗುತ್ತದೆ. ಸಣ್ಣ ಸಂಸ್ಥೆಗಳು ಮುಚ್ಚಿ ಹೋಗುತ್ತವೆ ಎಂದು ಅಂತರ್ಜಾಲ ಸ್ವಾತಂತ್ರ್ಯದ ಪ್ರತಿಪಾದಕರು ಮತ್ತು ಉದ್ಯಮ ಸಂಸ್ಥೆಗಳು ಹೇಳುತ್ತವೆ.
ಈ ಬಗ್ಗೆ ಭಾರತದಲ್ಲಿ ದೊಡ್ಡ ಚರ್ಚೆಯೇ ಆರಂಭಗೊಂಡಿದೆ. ರಾಜಕೀಯ ವಲಯದಲ್ಲೂ ಇದು ಬಿಸಿ ಬಿಸಿ ಚರ್ಚೆಗೆ ಆಸ್ಪದ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.