ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ದಾವಣಗೆರೆಯಲ್ಲಿ ಬಡವರಿಗೆ ಅಡುಗೆ ಅನಿಲ ಪೂರೈಸುವ ಮಹತ್ವದ ಯೋಜನೆಯಾದ ‘ಉಜ್ವಲ ಯೋಜನೆ’ಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಈ ಯೋಜನೆಯಡಿ ಬರೋಬ್ಬರಿ 3 ಕೋಟಿ ಬಡ ಕುಟುಂಬಗಳು ಎಲ್ಪಿಜಿ ಅಡುಗೆ ಅನಿಲವನ್ನು ಉಚಿತವಾಗಿ ಪಡೆದುಕೊಂಡಿದೆ ಎಂದರು.
’ಈ ಯೋಜನೆಯಡಿ ನಾವು ಯಾವುದೇ ಭದ್ರತಾ ಠೇವಣಿ ಇಲ್ಲದೆ 3 ವರ್ಷದಲ್ಲಿ 5 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಈಗಾಗಲೇ 3 ಕೋಟಿ ಅಡುಗೆ ಅನಿಲ ಒದಗಿಸಿದ್ದೇವೆ’ ಎಂದರು.
ಒಲೆಯ ಹೊಗೆಯಿಂದ ಮಹಿಳೆಯರಿಗೆ ಈ ಯೋಜನೆ ಮುಕ್ತಿ ನೀಡಿದೆ. ಇದರಿಂದ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಲಿದೆ. ಕಟ್ಟಿಗೆಯಿಂದ ಬರುವ ಹೊಗೆ 400 ಸುಡುವ ಸಿಗರೇಟುಗಳಿಗೆ ಸಮ ಎಂದು ಅಧ್ಯಯನಗಳು ತಿಳಿಸಿವೆ ಎಂದರು.
ಇದುವರೆಗೆ ದೇಶದ 1.13 ಕೋಟಿ ಶ್ರೀಮಂತರು ತಮ್ಮ ಸಬ್ಸಿಡಿ ಅಡುಗೆ ಅನಿಲವನ್ನು ತೊರೆದಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು, ಜನರ ಮನಸ್ಥಿತಿಯಲ್ಲಿ ಅಮೋಘ ಬದಲಾವಣೆಗಳಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ ಎಂದರು.
ಮಧ್ಯಮ ವರ್ಗದ ಜನ ಕೂಡ ಸಬ್ಸಿಡಿ ತೊರೆಯಲು ಮುಂದಾಗುತ್ತಿದ್ದಾರೆ, ಇದರಿಂದಾಗಿ ಬಡ ಕುಟುಂಬಗಳಿಗೆ ಉಚಿತ ಎಲ್ಪಿಜಿ ವಿತರಿಸಲು ಸರ್ಕಾರಕ್ಕೆ ಸಹಾಯವಾಗುತ್ತಿದೆ ಎಂದರು.
ಅಲ್ಲದೇ ತಲೆದೋರಿರುವ ಬರ ಪರಿಸ್ಥಿತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಎದುರಿಸಬೇಕಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.