ಬೆಂಗಳೂರು : ಟೀಮ್ 46 ರೇಸಿಂಗ್ ಕಮ್ಯುನಿಟಿ ವತಿಯಿಂದ ಮೇ 28 ಮತ್ತು 29 ರಂದು ಹೊಸೂರಿನ ತನೇಜಾ ಏರೊಸ್ಪೇಸ್ ಆಂಡ್ ಏವಿಯೇಷನ್ ಲಿಮಿಟೆಡ್ನ ರನ್ವೇಯಲ್ಲಿ ಬೆಂಗಳೂರು ಡ್ರ್ಯಾಗ್ ಫೆಸ್ಟ್-2016 ಹೆಸರಿನ ರೋಮಾಂಚಕ ಕಾರ್, ಬೈಕ್ ರೇಸಿಂಗ್ ಸ್ಪರ್ಧೆ ನಡೆಯಲಿದೆ.
ಅತ್ಯಂತ ವೃತ್ತಿಪರವಾಗಿ ಮತ್ತು ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿಕೊಂಡು ಕಳೆದ 6 ವರ್ಷಗಳಿಂದ ರೇಸ್ ನಡೆಸಿಕೊಂಡು ಬರುತ್ತಿರುವ ಟೀಮ್ 46 ರೇಸಿಂಗ್ ಪ್ರೈ.ಲಿ. ಸಂಸ್ಥೆ ಮತ್ತೊಂದು ಅತ್ಯಾಧುನಿಕ, ರೇಸಿಂಗ್ ಪಟುಗಳ ಪ್ರತಿಭೆಯನ್ನು ಸಮರ್ಥವಾಗಿ ಒರೆಗೆ ಹಚ್ಚುವ ರೀತಿಯಲ್ಲಿ ಈ ಸ್ಪರ್ಧೆ ಹಮ್ಮಿಕೊಂಡಿದೆ.
ವಿಮಾನ ನಿಲ್ದಾಣದ ರನ್ವೇಯಲ್ಲಿ ರೇಸ್ ನಡೆಸುವುದು ಬಹಳ ಅಪರೂಪ. ಅದಕ್ಕೆ ಮುಖ್ಯ ಕಾರಣ ಹೆಚ್ಚಿನ ರನ್ವೇಗಳು ಬ್ಯುಸಿಯಾಗಿರುವುದು ಮತ್ತು ಬಳಕೆಯಾಗದ ರನ್ವೇಗಳಲ್ಲಿ ಉತ್ತಮ ಟ್ರ್ಯಾಕ್ ಇಲ್ಲದಿರುವುದು. ಆದರೆ ಹೊಸೂರಿನ ತನೇಜಾ ಏರೊಸ್ಪೇಸ್ ಆಂಡ್ ಏವಿಯೇಷನ್ ಲಿಮಿಟೆಡ್ನಲ್ಲಿ ಅತ್ಯಂತ ಉತ್ತಮ ಟ್ರ್ಯಾಕ್ ವ್ಯವಸ್ಥೆ ಇದ್ದು, ಇದೊಂದು ರೇಸಿಂಗ್ ಪಟುಗಳ ನಿಜವಾದ ಪರೀಕ್ಷಾ ತಾಣವಾಗಲಿದೆ.
350 ರಷ್ಟು ಕಾರುಗಳು, 450೦ರಷ್ಟು ಬೈಕ್ಗಳ ಸಹಿತ 800 ಕ್ಕೂ ಅಧಿಕ ರೇಸಿಂಗ್ಕಾರು, ಬೈಕ್ಗಳ ಅದ್ಭುತ ಪ್ರದರ್ಶನಕ್ಕೆ ಹೊಸೂರಿನ ಈ ವಾಯುಲೆನೆ ವೇದಿಕೆಯಾಗಲಿದೆ. ಈ ರನ್ವೇಯ ಉದ್ದ 2.2 ಕಿ.ಮೀ. ಇದ್ದು, 45 ಮೀಟರ್ ಅಗಲ ಇದೆ.
ಏನಿದು ಡ್ರ್ಯಾಗ್ ರೇಸಿಂಗ್? : ದೇಶದಲ್ಲಿ ಆಟೊಕ್ರಾಸ್ ರ್ಯಾಲಿಗಳು, ಸರ್ಕಿಟ್ ರೇಸಿಂಗ್, ಡರ್ಟ್ ಟ್ರ್ಯಾಕ್, ಹಿಲ್ ಕ್ಲೈಂಬ್ ಮತ್ತು ಡ್ರ್ಯಾಗ್ ರೇಸಿಂಗ್ ಎಂಬ ಹಲವು ಬಗೆಯಲ್ಲಿ ಕಾರ್, ಬೈಕ್ ರೇಸ್ಗಳು ನಡೆಯುತ್ತಿವೆ. ಈ ಪೈಕಿ ಡ್ರ್ಯಾಗ್ ರೇಸಿಂಗ್ ವಿಶಿಷ್ಟವಾದುದು. ತುಂಬ ಕಡಿಮೆ ದೂರದ ರೇಸ್ ಸ್ಪರ್ಧೆ ಇದು. ಏಕಕಾಲದಲ್ಲಿ ಎರಡು ರೇಸಿಂಗ್ ವಾಹನಗಳನ್ನು ಸ್ಪರ್ಧೆಗೆ ಇಳಿಸಿ ಯಾವುದು ಮೊದಲಾಗಿ ಗುರಿ ತಲುಪುತ್ತದೆ ಎಂಬುದನ್ನು ಅತ್ಯಂತ ಕರಾರುವಾಕ್ ಎಲೆಕ್ಟ್ರಾನಿಕ್ ಟೈಮಿಂಗ್ ಮತ್ತು ಸ್ಪೀಡ್ ಸೆನ್ಸಿಂಗ್ ಸಿಸ್ಟಮ್ ಮೂಲಕ ನಿರ್ಧರಿಸಲಾಗುತ್ತದೆ. ಇಂತಹ ಡ್ರ್ಯಾಗ್ ರೇಸ್ ನಯವಾದ ರಸ್ತೆಗಳಲ್ಲಿ ಮತ್ತು ವಿಮಾನ ರನ್ವೇಗಳಂತಹ ನಿಯಂತ್ರಿತ ಟ್ರ್ಯಾಕ್ಗಳಲ್ಲಿ ನಡೆಯುತ್ತದೆ. ಸಾಮಾನ್ಯವಾಗಿ ಇಂತಹ ರೇಸ್ಗಳ ಉದ್ದ 201 ಮೀಟರ್, 350 ಮೀಟರ್, 402 ಮೀಟರ್ ಆಗಿರುತ್ತದೆ.
ಬೆಂಗಳೂರು ಡ್ರ್ಯಾಗ್ ರೇಸ್ 402 ಮೀಟರ್ ಉದ್ದದ ಟ್ರ್ಯಾಕ್ನಲ್ಲಿ ನಡೆಯಲಿದ್ದು, ವೇಗವಾಗಿ ಧುಮ್ಮಿಕ್ಕುವ ವಾಹನಗಳ ನಿಯಂತ್ರಣ ವ್ಯವಸ್ಥೆಗೆ ಸಾಕಷ್ಟು ಅವಕಾಶ ಇರುವುದಕ್ಕಾಗಿ ಇನ್ನೂ 700 ಮೀಟರ್ ಉದ್ದದ ಟ್ರ್ಯಾಕ್ ಅನ್ನು ಮುಕ್ತವಾಗಿ ಇಡಲಾಗುತ್ತದೆ.
ಸ್ಪರ್ಧಿಗಳಿಗೆ ಸಾಂಕೇತಿಕ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ. ಪ್ರೇಕ್ಷಕರಿಗೂ ಸಾಂಕೇತಿಕ ಪ್ರವೇಶ ಶುಲ್ಕ ಇದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇದೆ. ರೇಸಿಂಗ್ ನೋಡಲು ಬರುವ ಮಂದಿಯ ಸುರಕ್ಷತೆಗೂ ಅತ್ಯಂತ ಗರಿಷ್ಠ ಕಾಳಜಿ ವಹಿಸಲಾಗುತ್ತದೆ ಎಂದು ಹೇಳುತ್ತಾರೆ ಟೀಂ 46 ರೇಸಿಂಗ್ ಕಮ್ಯುನಿಟಿಯ ರಾಘವೇಂದ್ರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.