ನವದೆಹಲಿ: ಬಂಡಾಯ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಸೋಮವಾರ ಎಎಪಿ ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಮತ್ತು ಅಶಿಸ್ತನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಎಎಪಿಯ ರಾಷ್ಟ್ರೀಯ ಶಿಸ್ತುಪಾಲನ ಸಮಿತಿ ಇವರಿಬ್ಬರನ್ನು ಪಕ್ಷದಿಂದ ಹೊರ ಹಾಕಿದೆ. ಆನಂದ್ ಕುಮಾರ್ ಮತ್ತು ಅಜಿತ್ ಜಾ ಎಂಬ ಮತ್ತಿಬ್ಬರನ್ನೂ ಇದೇ ಕಾರಣ ಹೇಳಿ ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಾದವ್ ’ಉಚ್ಛಾಟನೆ ತೀವ್ರ ನೋವು ತಂದಿದೆ. ನಮ್ಮ ಸ್ವಂತ ಮನೆಯಿಂದಲೇ ನಮ್ಮನ್ನು ಎಳೆದು ಹೊರ ಹಾಕಿದ ಅನುಭವವಾಗುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರ ನಿಜವಾದ ಬಣ್ಣವನ್ನು ಅರ್ಥ ಮಾಡಿಕೊಳ್ಳದೆ ದೊಡ್ಡ ತಪ್ಪು ಮಾಡಿದೆವು’ ಎಂದಿದ್ದಾರೆ.
ಪ್ರಶಾಂತ್ ಭೂಷಣ್ ಅವರ ತಂದೆ ಶಾಂತಿ ಭೂಷಣ್ ಅವರೂ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದು, ‘ಕೇಜ್ರಿವಾಲ್ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದೆವು, ಅವರು ಎಂಥಾ ಮನುಷ್ಯ ಎಂದು ತಿಳಿದುಕೊಳ್ಳದ್ದು ನಮ್ಮ ಗಂಭೀರ ತಪ್ಪು, ಅವರು ನಿಜವಾದ ಹಿಟ್ಲರ್’ ಎಂದಿದ್ದಾರೆ.
ಯಾದವ್ ಮತ್ತು ಭೂಷಣ್ ಇಬ್ಬರೂ ಎಎಪಿ ಸಂಸ್ಥಾಪಕ ಸದಸ್ಯರಾಗಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಇವರ ಶ್ರಮ ಕೂಡ ಬಹಳಷ್ಟಿದೆ. ಇವರ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿ ಪಕ್ಷವನ್ನು ಒಗ್ಗಟ್ಟಿನಲ್ಲಿ ಮುನ್ನಡೆಸಲು ಪ್ರಯತ್ನಿಸುವ ಬದಲು ಪಕ್ಷದಿಂದಲೇ ಇವರನ್ನು ಉಚ್ಛಾಟನೆಗೊಳಿಸಿದ್ದು ಅರವಿಂದ್ ಕೇಜ್ರಿವಾಲ್ ಅವರಿಗೆ ಮುಂಬರುವ ದಿನಗಳಲ್ಲಿ ದುಬಾರಿಯಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.