ಮೈಸೂರು : ಕರ್ನಾಟಕ ಸರಕಾರ ತನ್ನ ಸಂಗ್ರಹದಲ್ಲಿದ್ದ 12 ಟನ್ನಷ್ಟು ಆನೆ ದಂತವನ್ನು ಬೆಂಕಿ ಹಾಕಿ ಸುಡಲು ಮುಂದಾಗಿದೆ. ಈ ದಂತವನ್ನು ಎರಡು ಹಂತಗಳಲ್ಲಿ ನಾಶಪಡಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ವನ್ಯಜೀವಿ ಘಟಕದ ಮುಖ್ಯಸ್ಥ ಎಂ.ಪಿ. ಹೊಸ್ಮಠ್ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳ ಬೇಟೆಗಾರರು, ಅನೆದಂತ ಚೋರರಿಂದ ಮತ್ತು ಕುಖ್ಯಾತ ದಂತಚೋರನಾಗಿದ್ದ ವೀರಪ್ಪನ್ ಇವರೆಲ್ಲರುಗಳಿಂದ ವಶಪಡಿಸಲಾಗಿದ್ದ ಆನೆದಂತಗಳು ಸರಕಾರದ ಸಂಗ್ರಹದಲ್ಲಿದೆ. ಪ್ರಸ್ತುತ ಈ ಆನೆದಂತಗಳು ಮೈಸೂರಿನ ಗಂಧದ ಕೋಟೆ ಸರ್ಕಾರಿ ಸಂಗ್ರಹಾಗಾರದಲ್ಲಿ ಬಿಗಿ ಭದ್ರತೆಯೊಂದಿಗೆ ಶೇಖರಿಸಿಡಲಾಗಿದೆ.
ಆನೆದಂತಗಳ ಭಧ್ರತೆ ಮತ್ತು ನಿರ್ವಹಣೆಗೆ ಸಾಕಷ್ಟು ವೆಚ್ಚ ತಗುಲುತ್ತಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟದ ಹೊರತು ಯಾವುದೇ ಲಾಭವಾಗುತ್ತಿಲ್ಲ. ಆದುದರಿಂದ ಅಕ್ಟೋಬರ್ ತಿಂಗಳಿನಲ್ಲಿ ಆನೆದಂತವನ್ನು ಸುಟ್ಟು ನಾಶಮಾಡುವ ಕಾರ್ಯ ನಡೆಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಸರಕಾರದ ಈ ಕ್ರಮದ ಬಗ್ಗೆ ವನ್ಯಜೀವಿ ತಜ್ಞ ಪ್ರವೀಣ್ ಭಾರ್ಗವ್ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಭಾರಿ ಬೆಲೆಯಿದ್ದು ಇದನ್ನು ಸುಡುವುದರಿಂದ ಆನೆದಂತಕ್ಕೆ ಮೌಲ್ಯವಿಲ್ಲವೆಂದು ದಂತಚೋರರು ಈ ದಂಧೆಯಿಂದ ದೂರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಕೀನ್ಯಾ ಸರಕಾರ ಅಪಾರ ಪ್ರಮಾಣದ ಆನೆದಂತಗಳನ್ನು ಸುಟ್ಟು ನಾಶಪಡಿಸಿದ್ದು, ಕರ್ನಾಟಕ ರಾಜ್ಯ ಸರಕಾರವು ಕೂಡಾ ಇದೇ ದಾರಿ ಅನುಸರಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.