ನವದೆಹಲಿ: ಆಸ್ಟ್ರೇಲಿಯಾದಲ್ಲಿ 4 ದಿನಗಳ ಕಾಲ ನಡೆಯಲಿರುವ ಮೇಕ್ ಇನ್ ಇಂಡಿಯಾ ಸಮ್ಮೇಳನದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಗವಹಿಸಲಿದ್ದಾರೆ. ಅವರು ಮಾ.28ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಅಲ್ಲಿಯ ಬಹುರಾಷ್ಟ್ರೀಯ ಕಂಪೆನಿಗಳ ಸಿಇಒಗಳನ್ನು ಭೇಟಿ ಮಾಡಲಿದ್ದಾರೆ.
ಜೇಟ್ಲಿ ಅವರ ಆಸ್ಟ್ರೇಲಿಯಾ ಪ್ರವಾಸದ ಮುಖ್ಯ ಉದ್ದೇಶ ವಿಶೇಷವಾಗಿ ಅಲ್ಲಿಯ ಮೂಲಸೌಕರ್ಯ ವಲಯದಲ್ಲಿ ವಿದೇಶಿ ಬಂಡವಾಳವನ್ನು ಆಕರ್ಷಿಸುವುದಾಗಿದೆ ಎಂದು ಸಚಿವಾಲಯದ ವರದಿ ತಿಳಿಸಿದೆ.
ಮೊದಲ ಹಂತದಲ್ಲಿ ಜೇಟ್ಲಿ ಅವರು ಸಿಡ್ನಿಯ ಎಸ್ ಪಿ ಜೈನ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್ಮೆಂಟ್ನಲ್ಲಿ ಸಂವಾದ ನಡೆಸಲಿದ್ದು, ಬಳಿಕ ಸಿಡ್ನಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಅಲ್ಲಿಯ ವಿದೇಶಾಂಗ ಸಚಿವ ಜ್ಯೂಲಿ ಬಿಷಪ್ ಅವರನ್ನು ಭೇಟಿ ಮಾಡಲಿದ್ದಾರೆ.
ಮಾ.30ರಂದು ಜೇಟ್ಲಿ ಅವರು ’ಮೇಕ್ ಇನ್ ಇಂಡಿಯಾ’ ಕುರಿತು ವಿಶೇಷ ಭಾಷಣ ಮಾಡಲಿದ್ದು, ಅಲ್ಲಿಯ ಬಹುರಾಷ್ಟ್ರೀಯ ಕಂಪೆನಿಗಳ ಸಿಇಒಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ನಂತರ ಆಸ್ಟ್ರೇಲಿಯಾದ ಎಂಪಿ, ಖಜಾಂಚಿ ಸ್ಕಾಟ್ ಮಾರಿಸ್ಸನ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಮಾ.31ರಂದು ಕ್ಯಾನ್ಬೆರಾದಲ್ಲಿ ಆಸ್ಟ್ರೇಲಿಯಾದ ಹಣಕಾಸು ಸಚಿವ ಸಿನೇಟರ್ ಮ್ಯಾಥಿಯಾಸ್ ಕೋರ್ಮನ್, ವಿದೇಶಾಂಗ ಸಚಿವ ಪೀಟರ್ ವರ್ಗೀಸ್, ಆಸ್ಟ್ರೇಲಿಯಾ ನ್ಯಾಷನಲ್ ಯೂನಿವರ್ಸಿಟಿ ಉಪಕುಲಪತಿಗಳನ್ನು ಭೇಟಿ ಮಾಡಲಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಕೆ. ಆರ್. ನಾರಾಯಣನ್ ಉಪನ್ಯಾಸದಲ್ಲಿ ಜೇಟ್ಲಿ ಭಾಗವಹಿಸಲಿದ್ದು, ಆಸ್ಟ್ರೇಲಿಯಾದ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೊನೆಯದಾಗಿ ಎ.1ರಂದು ಫೂಚರ್ ಫಂಡ್ನ ಅಧ್ಯಕ್ಷ ಪೀಟರ್ ಕೋಸ್ಟೆಲ್ಲೋ ಜೊತೆ ಮಾತುಕತೆ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.