ಗಲ್ಫ್ ರಾಷ್ಟ್ರಗಳಿಗೆ ದುಡಿಯುವುದಕ್ಕಾಗಿ ಹೋಗಿರುವ ಭಾರತೀಯರು ಅಲ್ಲಿ ನಾನಾ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಬ್ದುಲ್ ಸತ್ತರ್ ಮಕಂದರ್ ಎಂಬಾತ ಸೌದಿಯಲ್ಲಿ ಡ್ರೈವರ್ ಆಗಿರುವ ತಾನು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವೀಡಿಯೋದಲ್ಲಿ ಎಳೆಎಳೆಯಾಗಿ ವಿವರಿಸಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಆ ವೀಡಿಯೋ ಹರಿದಾಡಿದ ಬಳಿಕ ಮಕಂದರ್ ಪರಿಸ್ಥಿತಿ ಮತ್ತಷ್ಟು ಶೋಚನೀಯ ಸ್ಥಿತಿಗೆ ತಲುಪಿದೆ.
ದೆಹಲಿ ಮೂಲದ ಹೋರಾಟಗಾರ ಕುಂದನ್ ಶ್ರೀವಾಸ್ತವ್ ಎಂಬುವವರು ಮಕಂದರ್ ಕಷ್ಟಗಳ ಬಗ್ಗೆ ವೀಡಿಯೋ ಮಾಡಿ ಅದನ್ನು ಹರಿಬಿಟ್ಟಿದ್ದರು. ಇದರಲ್ಲಿ ಮಕಂದರ್ ತಾನು ಮಾಲೀಕನಿಂದ ಅನುಭವಿಸುತ್ತಿರುವ ಕಷ್ಟಗಳನ್ನು ಹೇಳಿಕೊಂಡಿದ್ದ. ಅಲ್ಲದೇ ನನ್ನನ್ನು ಭಾರತಕ್ಕೆ ಬರಲು ಬಿಡುತ್ತಿಲ್ಲ ಎಂದು ದುಃಖ ತೋಡಿಕೊಂಡಿದ್ದ.
ಈ ವಿಡಿಯೋ ಹರಿದಾಡಿದ ಕೆಲವೇ ದಿನಗಳಲ್ಲಿ ಸೌದಿಯಲ್ಲಿ ಮಕಂದರ್ನ ಬಂಧನವಾಗಿದೆ. ಆತನ ಕಂಪನಿಯ ಮಾಲೀಕನೇ ನಿಯಮ ಮುರಿದ ದೂರು ನೀಡಿ ಆತನನ್ನು ಬಂಧಿಸಿದ್ದಾನೆ.
ಬಳಿಕ ಶ್ರೀವಾಸ್ತವ್ ಅವರು ಕಂಪನಿಯ ಕ್ಷಮಾಪಣೆ ಕೇಳಿ, ವೀಡಿಯೋವನ್ನು ಡಿಲೀಟ್ ಮಾಡಿ ಮಕಂದರ್ನನ್ನು ಬಿಡುವಂತೆ ಮನವಿ ಮಾಡಿದ್ದರು. ಇದರಿಂದಾಗಿ ಮಕಂದರ್ನ ರಿಲೀಸ್ ಆಗಿತ್ತು. ಆದರೆ ರಿಲೀಸ್ ಆದ ಮರುದಿನ ಮತ್ತೆ ಆತನನ್ನು ಬೇರೆ ಯಾವುದೋ ಆರೋಪದ ಮೇರೆಗೆ ಬಂಧಿಸಲಾಗಿದೆ. ಇದೀಗ ಮಕಂದರ್ ಸಂಪರ್ಕಕ್ಕೂ ಸಿಗುತ್ತಿಲ್ಲ.
ಶ್ರೀವಾಸ್ತವ್ ಅವರು ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಹೇಳಿಕೊಂಡಿದ್ದಾರೆ. ಆದರೆ ಇದುವರೆಗೆ ಅವರ ಕಡೆಯಿಂದಲೂ ಯಾವ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಮಕಂದರ್ ಕುಟುಂಬ ಆತಂಕದಲ್ಲಿದೆ.
ಒಟ್ಟಿನಲ್ಲಿ ಸೌದಿಯಲ್ಲಿ ದುಡಿದು ಹಣ ಸಂಪಾದನೆ ಮಾಡುವ ಆಸೆಯೊಂದಿಗೆ ದೇಶ ತೊರೆಯುವ ಜನರು ಅಲ್ಲಿನ ಕ್ರೂರತ್ವಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ದೇಶ ಬಿಡುವ ಮುನ್ನ ಪ್ರತಿಯೊಬ್ಬರೂ ಕೂಲಂಕುಷವಾದ ಪರಿಶೀಲನೆ ಮಾಡಿಕೊಳ್ಳುವುದು ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.