ನವದೆಹಲಿ: ಸಾಧಿಸುವ ಛಲ, ಪ್ರತಿಭೆ ಎರಡೂ ಇದ್ದರೂ ಕೈಯಲ್ಲಿ ಕಾಸಿಲ್ಲ ಎಂಬ ಕಾರಣಕ್ಕೆ ಭಾರತದ ಅದೆಷ್ಟೋ ಉದಯೋನ್ಮುಖ ಆಟಗಾರರ ಕನಸು ಕಮರಿ ಹೋಗಿದೆ. ಕ್ರೀಡಾಂಗಣದಲ್ಲಿ ಮಿಂಚಬೇಕಾದವರು ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಲೋ, ಕಸ ಗುಡಿಸುತ್ತಲೋ ತಮ್ಮ ದುರಾದೃಷ್ಟದ ಬಗ್ಗೆ ಹಿಡಿಶಾಪ ಹಾಕುತ್ತಿರುತ್ತಾರೆ.
ಆದರೆ ಇಲ್ಲೊಬ್ಬ ಆಟಗಾರ ತನ್ನ ಕನಸನ್ನು ಈಡೇರಿಸುವ ಸಲುವಾಗಿ ಭಯಾನಕ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ನಾನು ಕಿಡ್ನಿಯನ್ನು ಮಾರುತ್ತಿದ್ದೇನೆ ಎಂದು ಫೇಸ್ಬುಕ್ನಲ್ಲಿ ಜಾಹೀರಾತು ನೀಡಿದ್ದಾನೆ.
20 ವರ್ಷದ ರವಿ ದೀಕ್ಷಿತ್ ಒರ್ವ ಅದ್ಭುತ ಸ್ಕ್ವಾಶ್ ಆಟಗಾರ. 2010ರ ಏಷ್ಯನ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಪದಕ ಗೆದ್ದವನು. ಆದರೆ ಮುಂಬರುವ ಸೌತ್ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಲು ಆತನ ಬಳಿ ಹಣವಿಲ್ಲ.
ಯಾರೊಬ್ಬರೂ ತನ್ನ ಬೆಂಬಲಕ್ಕೆ ಧಾವಿಸದೇ ಇರುವುದರಿಂದ ಬೇಸತ್ತ ಈತ ತನ್ನ ಕಿಡ್ನಿಯನ್ನು ಮಾರುತ್ತಿದ್ದೇನೆ, ಅಗತ್ಯವುಳ್ಳವರು ದಯ ಮಾಡಿ ನನ್ನನ್ನು ಸಂಪರ್ಕಿಸಿ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾನೆ.
’10 ವರ್ಷದಿಂದ ಸ್ಕ್ವಾಶ್ ಆಡುತ್ತಿದ್ದೇನೆ. ಹಲವಾರು ಪ್ರಶಸ್ತಿಗಳನ್ನು ಪಡೆದರೂ, ಭಾರತವನ್ನು ಹಲವಾರು ಬಾರಿ ಪ್ರತಿನಿಧಿಸಿದರೂ ನನಗೆ ನನ್ನ ಕ್ರೀಡೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಮುಂದಿನ ತಿಂಗಳು ಗುವಾಹಟಿಯಲ್ಲಿ ಪಂದ್ಯವಿದೆ, ನಾನು ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. ಚೆನ್ನೈನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಆದರೆ ನನ್ನ ಬಳಿ ಸಾಕಷ್ಟು ಹಣವಿಲ್ಲ. ಈಗ ನಾನು ಕಿಡ್ನಿ ಮಾರಲು ರೆಡಿಯಾಗಿದ್ದೇನೆ. ಬೇಕಾದವರು ನನ್ನನ್ನು ಸಂಪರ್ಕಿಸಬಹುದು. ನನ್ನ ಕಿಡ್ನಿ ಬೆಲೆ 8 ಲಕ್ಷ’ ಎಂದು ಆತ ಪೋಸ್ಟ್ ಮಾಡಿದ್ದಾನೆ.
ಆತನ ಈ ನಿರ್ಧಾರ ಆತನ ತಂದೆ ರಾಮ್ಕೈಲಾಶ್ ದೀಕ್ಷಿತ್ ಅವರನ್ನು ಆಘಾತಕ್ಕೊಳಪಡಿಸಿದೆ. ರವಿ ಸ್ಕ್ವಾಶ್ನಲ್ಲಿ ವಿಜಯಿ ಆದದ್ದರಿಂದಲೇ ಅವರು ಮಗಳ ಮದುವೆ ನೆರವೇರಿಸಿದ್ದರು. ಅವನೇ ಇವರ ಕುಟುಂಬಕ್ಕೆ ಆಧಾರವಾಗಿದ್ದಾನೆ. ಈ ರೀತಿ ಮಾಡಬೇಡ, ಕುಳಿತು ಯೋಚಿಸಿ ಏನಾದರೂ ಹಣಕ್ಕಾಗಿ ವ್ಯವಸ್ಥೆ ಮಾಡೋಣ ಎಂದು ಅವರು ಮಗನ ಬಳಿ ಅಂಗಲಾಚಿದ್ದಾರೆ.
ಬಡ ಆಟಗಾರರಿಗೆ ಇನ್ನಾದರೂ ಸರ್ಕಾರಗಳು ಸಹಾಯಹಸ್ತ ಚಾಚಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.