ಪಠಾಣ್ಕೋಟ್ : ಪಠಾಣ್ಕೋಟ್ನ ವಾಯುನೆಲೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಭೇಟಿ ನೀಡಿ, ಸೇನಾಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದರು. ಸ್ವತಃ ಘಟನಾ ಸ್ಥಳಕ್ಕೆ ತೆರಳಿ ವೀಕ್ಷಣೆ ನಡೆಸಿದರು.
ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪರಿಕ್ಕರ್, ಸತತ 3 ದಿನಗಳಿಂದ ನಡೆದಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯಗೊಂಡಿದ್ದು ಎಲ್ಲಾ ಆರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಆದರೆ ಮುನ್ನೆಚ್ಚರಿಕೆಯ ಅಂಗವಾಗಿ ಕೂಂಬಿಂಗ್ ಆಪರೇಷನ್ನನ್ನು ಮುಂದುವರಿಸಲಾಗಿದೆ ಎಂದು ಹೇಳಿದರು.
ವಾಯುಸೇನೆಯ ಪ್ರಮುಖ ಯುದ್ಧೋಪಕರಣಗಳನ್ನು ರಕ್ಷಿಸುವಲ್ಲಿ ಭಾರತೀಯ ಸೇನೆ ಸಾಹಸ ಮತ್ತು ಧೈರ್ಯದಿಂದ ತನ್ನ ಕಾರ್ಯವನ್ನು ನಿರ್ವಹಿಸಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ನಮ್ಮ ಭಾರತೀಯ ಸೇನೆಯನ್ನು ಶ್ಲಾಘಿಸುತ್ತೇನೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಸೈನಿಕರಿಗೂ ಅಭಿನಂದನೆ ಸಲ್ಲಿಸುತ್ತೇನೆ. ದಾಳಿ ವೇಳೆ ಹುತಾತ್ಮರಾದ ವೀರ ಯೋಧರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಲಾಗುವುದು ಮತ್ತು ಹುತಾತ್ಮ ಯೋಧನ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸವನ್ನು ನೀಡಲಾಗುವುದು. ದಾಳಿ ವೇಳೆ ಗಾಯಾಳುಗಳಾದವರಿಗೆ ಪರಿಹಾರ ನೀಡಲಾಗುತ್ತದೆ ಎಂದರು.
ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಆತ್ಮಾಹುತಿ ದಾಳಿಗೆ ತಯಾರಿ ನಡೆಸಿ ಬಂದಿದ್ದರು. ಇಬ್ಬರು ಉಗ್ರರ ಮುಖ ಗುರುತು ಹಿಡಿಯಲಾರದಷ್ಟು ಸುಟ್ಟು ಹೋಗಿದ್ದು, ಅವುಗಳ ಡಿಎನ್ಎ ಪರೀಕ್ಷೆ ನಡೆಸಲಾಗುವುದು. ಇನ್ನಿಬ್ಬರು ಅಡಗಿದ್ದ ಜಾಗದಲ್ಲಿ ಬಹಳಷ್ಟು ಹಾನಿಯಾಗಿದೆ. ಉಗ್ರರ ಬಳಿಯಲ್ಲಿದ್ದ ಶಸ್ತ್ರಾಸ್ತ್ರಗಳು ಪಾಕಿಸ್ಥಾನದಲ್ಲಿ ತಯಾರಾಗಿರುವುದಾಗಿ ಮಾಹಿತಿಗಳಿವೆ, ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿರುವ ಶಂಕೆಯೂ ವ್ಯಕ್ತವಾಗಿದೆ. ಈ ಬಗ್ಗೆ ಇನ್ನಷ್ಟು ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದರು.
ಉಗ್ರರ ದಾಳಿಯ ಕುರಿತು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಲಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ಥಾನ ಭರವಸೆ ನೀಡಿದೆ ಪರಿಕ್ಕರ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.