ತಿರುವನಮಲೈ: ಎ.7ರಂದು ಆಂಧ್ರಪ್ರದೇಶದ ಚಿತ್ತೋರ್ ಅರಣ್ಯದಲ್ಲಿ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿರುವ ಆರೋಪಿತ ರಕ್ತಚಂದನ ಕಳ್ಳಸಾಗಾಣೆದಾರರ ಮೃತದೇಹಗಳನ್ನು ಮಣ್ಣು ಮಾಡಲು ಸಂಬಂಧಿಕರು ನಿರಾಕರಿಸಿದ್ದಾರೆ. ಮೃತರು ಕಳ್ಳಸಾಗಾಣೆದಾರರಲ್ಲ, ಪೊಲೀಸರು ಯೋಜಿತವಾಗಿ ಇವರನ್ನು ಕೊಲೆ ಮಾಡಿದ್ದಾರೆ ಎಂಬುದು ಇವರ ಗಂಭೀರ ಆರೋಪವಾಗಿದೆ.
ತಿರುವನಮಲೈನ ಪಡವೇಡು ಬಳಿ ರಸ್ತೆ ತಡೆ ನಡೆಸಿ ಇವರು ಪ್ರತಿಭಟನೆ ನಡೆಸುತ್ತಿದ್ದು, ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮೃತರೊಬ್ಬರ ಪತ್ನಿ ಪಿಟಿಷನ್ ಹಾಕಿದ ಹಿನ್ನಲೆಯಲ್ಲಿ ತಮಿಳುನಾಡು ಮೂಲದ ಆರು ಮಂದಿ ಮೃತರ ಅಂತ್ಯಸಂಸ್ಕಾರವನ್ನು ಮದ್ರಾಸ್ ಹೈಕೋರ್ಟ್ ಕೆಲ ದಿನಗಳ ಕಾಲ ತಡೆ ಹಿಡಿದಿದೆ. ಈ ಆರು ಮಂದಿಯನ್ನು ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕು ಎಂದು ಪಿಟಿಷನ್ನಲ್ಲಿ ಕೋರಲಾಗಿದೆ.
‘ನನ್ನ ಪತಿ ಪೇಟಿಂಗ್ಗೆಂದು ಹೋಗಿದ್ದರು. ಆದರೆ ಅವರನ್ನು ಪೊಲೀಸರು ಬಸ್ನಿಂದ ಕೆಳಕ್ಕೆ ಎಳೆದು ಗುಂಡಿಕ್ಕಿ ಕೊಲೆ ಮಾಡಿದ್ದಾರೆ’ ಎಂದು ಮೃತ ಮುರುಗನ್ ಎಂಬುವವರ ಪತ್ನಿ ಆರೋಪಿಸಿದ್ದಾರೆ.
‘ಅವರು ನನಗೆ ಹಣ ಕೊಡಬಹುದು, ಆದರೆ ನನ್ನ ಮಕ್ಕಳು ತಂದೆ ಬೇಕು ಎಂದು ಕೇಳುತ್ತಿದ್ದಾರೆ, ಅವರಿಗೆ ನಾನು ಏನೆಂದು ಹೇಳಲಿ? ಅವರು ನನ್ನ ಪತಿಯ ನರಮೇಧ ಮಾಡಿದ್ದಾರೆ. ಅವರನ್ನು ಕೊಂದವರಿಗೆ ಕಠಿಣ ಶಿಕ್ಷೆಯಾಗಲೇ ಬೇಕು’ ಎಂದು ಮೃತ ಶಶಿಕುಮಾರ್ ಪತ್ನಿ ಆಗ್ರಹಿಸಿದ್ದಾರೆ.
‘ಆಂಧ್ರಪ್ರದೇಶದ ಪೊಲೀಸರು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ೭ ಮಂದಿಯನ್ನು ಹೊರಕ್ಕೆ ತಳ್ಳಿ ಬಳಿಕ ಗುಂಡಿಕ್ಕಿ ಕೊಂದರು’ ಎಂದು ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಘಟನೆಯಲ್ಲಿ 20 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಇದರಲ್ಲಿ ಆರು ಮಂದಿ ತಮಿಳುನಾಡು ಮೂಲದವರಾಗಿದ್ದರು. ಒಟ್ಟಿನಲ್ಲಿ ಎನ್ಕೌಂಟರ್ ಪ್ರಕರಣ ದಿನದಿಂದ ದಿನಕ್ಕೆ ಹಲವಾರು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದರಿಂದ ಆಂಧ್ರ ಮತ್ತು ತಮಿಳುನಾಡಿನ ಸಂಬಂಧಕ್ಕೆ ಧಕ್ಕೆಯುಂಟಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.