
ನವದೆಹಲಿ: ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಅವರ ವಯಸ್ಸನ್ನು ಪರಿಗಣಿಸಿ ಅವರು ಕುಳಿತು ಘೋಷಣೆಗಳನ್ನು ಕೂಗಬಹುದು ಎಂದು ಹೇಳಿದರು.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯಕ್ಕೆ ಉತ್ತರಿಸಿದ ಅವರು, ರಾಷ್ಟ್ರಪತಿಯವರು ಈ ದೇಶದ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ, ಬಡವರು, ಗ್ರಾಮಗಳು, ರೈತರು, ಮಹಿಳೆಯರು, ವಿಜ್ಞಾನ, ತಂತ್ರಜ್ಞಾನ, ಕೃಷಿ… ಎಲ್ಲಾ ವಿಷಯಗಳನ್ನು ವಿಸ್ತಾರವಾಗಿ ಇಟ್ಟುಕೊಂಡು ಭಾರತದ ಪ್ರಗತಿಯ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಿದ್ದಾರೆ. ದೇಶದ ಯುವಕರು ಭಾರತದ ಸಾಮರ್ಥ್ಯವನ್ನು ಹೇಗೆ ಮುಂದುವರಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ವಿಸ್ತಾರವಾಗಿ ಚರ್ಚೆ ಮಾಡಿದ್ದಾರೆ. ಪ್ರತಿ ವರ್ಗದ ಸಾಮರ್ಥ್ಯವನ್ನು ಅವರು ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಭಾರತದ ಉಜ್ಜ್ವಲ ಭವಿಷ್ಯದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದು ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದರು.
21ನೇ ಶತಮಾನದ ಮೊದಲ ತ್ರೈಮಾಸಿಕ ಪೂರ್ಣಗೊಂಡಿದೆ, ಈ ಎರಡನೇ ತ್ರೈಮಾಸಿಕವೂ ಅಷ್ಟೇ ನಿರ್ಣಾಯಕವಾಗಿದೆ, ಹಿಂದಿನ ಶತಮಾನದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎರಡನೇ ಕಾಲಾವಧಿ ಹೇಗೆ ನಿರ್ಣಾಯಕವಾಗಿತ್ತೋ ಅದೇ ರೀತಿ ವಿಕಸಿತ ಭಾರತದ ನಿರ್ಮಾಣದ ದಿಸೆಯಲ್ಲಿ ಈ ಎರಡನೇ ಕಾಲಾವಧಿಯೂ ಅಷ್ಟೇ ಸಾಮರ್ಥ್ಯಯುತವಾಗಿರಲಿದೆ, ಶರ ವೇಗದಲ್ಲಿ ಮುಂದುವರಿಯಲಿದೆ.
ಇಂದು ರಾಷ್ಟ್ರದ ಪ್ರತಿ ವ್ಯಕ್ತಿಯೂ ನಾವು ಒಂದು ಮಹತ್ವದ ಹಂತಕ್ಕೆ ತಲುಪಿದ್ದೇವೆ ಎಂಬುದನ್ನು ಇಂದು ಅರಿತುಕೊಂಡಿದ್ದಾನೆ. ಈಗ ನಾವು ನಿಲ್ಲಬಾರದು, ಹಿಂದಕ್ಕೆ ತಿರುಗಿ ನೋಡಬಾರದು. ವೇಗದ ಗತಿಯಲ್ಲಿ ಮುಂದುವರಿಯಬೇಕು ಮತ್ತು ಗುರಿಯನ್ನು ಸಾಧಿಸಿಕೊಂಡೇ ಮುಂದೆ ಹೋಗಬೇಕು. ಈ ದಿಸೆಯಲ್ಲೇ ನಾವು ಮುಂದುವರಿಯುತ್ತಿದ್ದೇವೆ. ಇಂದು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ಅತ್ಯುನ್ನತ ಪ್ರಗತಿಯನ್ನು ಕಾಣುತ್ತಿದೆ. ಚಿತ್ರ ಪ್ರಗತಿ ಮತ್ತು ಕಡಿಮೆ ಹಣದುಬ್ಬರದ ಅಪರೂಪದ ಸಂಯೋಗ ಭಾರತದ ದೃಢ ಆರ್ಥಿಕತೆಗೆ ಸಾಕ್ಷಿಯಾಗಿದೆ ಎಂದರು.
ಭಾರತವು ವಿಶ್ವದ ಹಲವು ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಇತ್ತೀಚಿಗಷ್ಟೇ ನಾವು 9 ಒಪ್ಪಂದಗಳನ್ನು ಅಂತಿಮಗೊಳಿಸಿದ್ದೇವೆ. ಇದರಲ್ಲಿ ಹೆಚ್ಚು ಮಹತ್ವದ್ದು ನಾವು 27 ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳೊಂದಿಗೆ ಸಹಿ ಮಾಡಿದ ‘ಮದರ್ ಆಫ್ ಆಲ್ ಡೀಲ್ಸ್’.
ದೇಶ ಸ್ವಾತಂತ್ರ್ಯಗೊಂಡಾಗ ನಾವು ವಿಶ್ವದ 6 ನೇ ಆರ್ಥಿಕತೆಯಾಗಿದ್ದೆವು. ಆದರೆ ಕೆಲವರು ಭಾರತವನ್ನು 11ನೇ ಸ್ಥಾನಕ್ಕೆ ತಂದಿಟ್ಟರು. ಇಂದು ನಾವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವತ್ತ ಮುನ್ನಡೆಯುತ್ತಿದ್ದೇವೆ. ಇಂದು ಪ್ರತಿ ಕ್ಷೇತ್ರದಲ್ಲಿ ಭಾರತ ಆತ್ಮವಿಶ್ವಾಸವನ್ನು ತುಂಬಿಕೊಂಡಿದೆ. ‘ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ’ಯ ಮಾರ್ಗದರ್ಶಿ ಸೂತ್ರದೊಂದಿಗೆ ನಾವು ಪ್ರಗತಿ ಸಾಧಿಸುತ್ತಿದ್ದೇವೆ. ಇದರ ಫಲಿತಾಂಶವಾಗಿ ದೇಶವು ಇಂದು ಸುಧಾರಣೆಯ ಎಕ್ಸ್ಪ್ರೆಸ್ ಪಥದಲ್ಲಿದೆ. ನಾವು ರಚನಾತ್ಮಕ, ಪ್ರಕ್ರಿಯೆ ಸಂಬಂಧಿತ ಮತ್ತು ನೀತಿ ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮ ಪ್ರಯತ್ನಗಳು ಉತ್ಪಾದನಾ ವಲಯವನ್ನು ಬಲಪಡಿಸುವ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವತ್ತ ಗಮನಹರಿಸಿದೆ. ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಲು ಭಾರತ ಸಿದ್ಧವಾಗಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದಿದ್ದಾರೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


