ಆ
ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ದೃಢ ಸಂಕಲ್ಪ ಮಾಡಿರುವ ಕರ್ನಾಟಕದ ಪುಟ್ಟ ಹಳ್ಳಿಯೊಂದು ಈಗ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇಲ್ಲಿಂದ ವಿದೇಶಗಳಿಗೆ ರಫ್ತಾಗುವ ಪರಿಸರ ಸ್ನೇಹಿ ಬ್ಯಾಗುಗಳು ಭಾರೀ ಮೆಚ್ಚುಗೆಯನ್ನು ಪಡೆಯುತ್ತಿದೆ. ಹಾಗಾದರೆ ಆ ಗ್ರಾಮ ಯಾವುದು ಎನ್ನುತ್ತೀರಾ, ಅದುವೇ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮ. ಒಂದು ಕಾಲದಲ್ಲಿ ಕೃಷಿಯನ್ನು ನೆಚ್ಚಿಕೊಂಡಿದ್ದ ಈ ಗ್ರಾಮದಲ್ಲಿ ಸಕಾಲಿಕ ಮಳೆ ಆಗಿಲ್ಲವೆಂದರೆ ಹೊಟ್ಟೆಗೆ ತಣ್ಣೀರೆ ಗತಿ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಭೂಮಿ ಇಲ್ಲದ ಬಡವರಿಗೆ ವರ್ಷದಲ್ಲಿ 12 ತಿಂಗಳು ಕೂಲಿ ಸಿಗುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಕೂಲಿ ಅರಸಿ ಊರಿಂದ ಊರಿಗೆ ಗುಳೆ ಹೋಗುವ ಅನಿವಾರ್ಯತೆ ಇತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಅಲ್ಲಿನ ಮಹಿಳೆಯರು ಪರಿಸರ ಸ್ನೇಹಿ ಬ್ಯಾಗುಗಳ ತಯಾರಿಕೆಯಲ್ಲಿ ಪಳಗಿದ್ದಾರೆ, ಅವರು ತಯಾರಿಸುವ ಬ್ಯಾಗುಗಳಿಗೆ ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯೂ ಇದೆ. ಕಳೆದ 24 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಬ್ಯಾಗ್ ತಯಾರಿಕೆ ಎಂಬುದು ಮೇಕಲಮರಡಿ ಗ್ರಾಮದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ.
ಈ ಗ್ರಾಮದ ಮಹಿಳೆಯರ ಈ ಆರ್ಥಿಕ ಸ್ವಾವಲಂಬನೆ ಹಿಂದೆ ಇರುವುದು ಶ್ರಮಿಕ ಕಲಾ ಸಂಸ್ಥೆ. ಮಹಿಳೆಯರಿಗೆ ಬ್ಯಾಗ್ ತಯಾರಿಕೆ ತರಬೇತಿ ನೀಡಿ, ಕೆಲಸವನ್ನೂ ಈ ಸಂಸ್ಥೆ ನೀಡಿದೆ. ಈ ಸಂಸ್ಥೆಯ ಶ್ರಮದ ಫಲವಾಗಿ ಇಂದು ವಿದೇಶದಲ್ಲೂ ಮೇಕಲಮರಡಿ ಗ್ರಾಮ ರಾರಾಜಿಸುವಂತಾಗಿದೆ. ಸೆಣಬು, ಚರ್ಮ, ಕುರಿ ಉಣ್ಣೆಯಿಂದ ಇಲ್ಲಿ ತಯಾರಾಗುವ ತರಹೇವಾರಿ ಬ್ಯಾಗ್ ಮತ್ತು ಇತರ ವಸ್ತುಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಅಮೆರಿಕಾ, ಇಂಗ್ಲೆಂಡ್, ಸ್ಪೇನ್, ಜರ್ಮನಿ, ಜಪಾನ್, ಆಸ್ಟ್ರೇಲಿಯಾ, ಕೆನಡಾ ಸೇರಿ ಮತ್ತಿತರ ದೇಶಗಳ ಮಾರುಕಟ್ಟೆಗಳಲ್ಲಿ ಮೇಕಲಮರಡಿಯ ಬ್ಯಾಗ್ ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಸಪ್ತಸಾಗರದಾಚೆಯೂ ಇವರ ವಹಿವಾಟು ಚಾಚಿಕೊಂಡಿದೆ. ಇದರಿಂದ 42 ಮಹಿಳೆಯರು ಬದುಕು ಕಟ್ಟಿಕೊಂಡಿದ್ದು, ಇತರರಿಗೂ ಸ್ಪೂರ್ತಿಯಾಗಿದ್ದಾರೆ.
ಮೇಕಲಮರಡಿ ಗ್ರಾಮದ ಮಹಿಳೆಯರಿಗೆ ಸ್ವಂತ ಊರಲ್ಲೇ ಉದ್ಯೋಗ ಕಲ್ಪಿಸುವ ಉದ್ದೇಶದಿಂದ 2001ರಲ್ಲಿ ಶ್ರಮಿಕ ಕಲಾ ಸಂಸ್ಥೆಯು ಬ್ಯಾಗ್ ತಯಾರಿಕೆಯನ್ನು ಆರಂಭಿಸಿತ್ತು. 2006 ರಲ್ಲೇ ಇಲ್ಲಿ ಬ್ಯಾಗುಗಳು ವಿದೇಶಕ್ಕೆ ರಫ್ತುಗಳು ಪ್ರಾರಂಭವಾದವು. ಬಳಿಕ 42 ಮಹಿಳೆಯರು ಸೇರಿ “ಉನ್ನತಿ ಹ್ಯಾಂಡಿಕ್ರಾಫ್ಟ್ಸ್” ಸಂಸ್ಥೆಯಡಿ ಬ್ಯಾಗ್ ಮತ್ತು ಇತರ ವಸ್ತುಗ: ತಯಾರಿಕೆಯನ್ನು ಆರಂಭಿಸಿದ್ದಾರೆ. ಪ್ರತಿ ವರ್ಷ ಏನಿಲ್ಲ ಅಂದರೂ 5 ಸಾವಿರ ಬ್ಯಾಗ್ ಸೇರಿ ಮತ್ತಿತರ ವಸ್ತುಗಳು ಮಾರಾಟ ಆಗುತ್ತವೆ.
ಕುಶನ್ ಕವರ್, ಲಾಂಡ್ರಿ ಬಾಸ್ಕೇಟ್, ಬಿಗ್ ಪ್ಲಾಂಟರ್, ಸ್ಟೋರೇಜ್ ಬಾಸ್ಕೇಟ್, ಡಿನ್ನರ್ ಬಾಸ್ಕೇಟ್, ಟ್ರೇಗಳು, ಶೋಲ್ಡರ್ ಬ್ಯಾಗ್, ಟೋಟ್ ಬ್ಯಾಗ್, ಕ್ವಾಯಿಲ್ ಬ್ಯಾಗ್, ರೌಂಡ್ ಬ್ಯಾಗ್, ಪಿಕ್ನಿಕ್ ಬ್ಯಾಗ್, ಕುಶನ್ ಕವರ್, ಯೋಗಾ ಮ್ಯಾಟ್, ಮೆಡಿಟೇಶನ್ ಮ್ಯಾಟ್, ಕುರಿಉಣ್ಣೆಯ ಬ್ಯಾಗ್ ಸೇರಿ 365 ಕ್ಕೂ ಹೆಚ್ಚಿನ ಮಾದರಿ ಬ್ಯಾಗ್ ಮತ್ತು ಇತರೆ ವಸ್ತುಗಳು ಇಲ್ಲಿನ ಮಹಿಳೆಯರು ತಯಾರಿಸುತ್ತಾರೆ. ಸೆಣಬು, ಕಾಟನ್ ದಾರ, ಆಡು ಮತ್ತು ಕುರಿ ಚರ್ಮ, ಕುರಿ ಉಣ್ಣೆ, ಬಾಳೆ ನಾರು ಸೇರಿ ಮತ್ತಿತರ ಕಚ್ಚಾ ವಸ್ತುಗಳನ್ನು ಇವುಗಳ ತಯಾರಿಕೆಗೆ ಬಳಸಲಾಗುತ್ತದೆ. ಸೆಣಬನ್ನು ಕೊಲ್ಕತ್ತಾ, ಬೆಳಗಾವಿಯಿಂದ ದಾರ, ಯರಗಟ್ಟಿಯಿಂದ ಉಣ್ಣೆ, ಆನೆಗೊಂದಿಯಿಂದ ಬಾಳೆ ನಾರನ್ನು ತರಿಸಿಕೊಳ್ಳುತ್ತಾರೆ. ಮೊದಲಿಗೆ ಕೈ ಮಗ್ಗದಿಂದ ಬಟ್ಟೆ ತಯಾರಿಸಿಕೊಳ್ಳುತ್ತಾರೆ. ಆ ಮೇಲೆ ಟೇಲರಿಂಗ್ ಯಂತ್ರದಲ್ಲಿ ಬ್ಯಾಗ್ ಫ್ರೇಮ್ ಮಾಡಿಕೊಂಡು, ಕೈ ಹೊಲಿಗೆ ಹಾಕುತ್ತಾರೆ. ಬ್ಯಾಗ್ಗೆ ಬೇಕಾದ ಹ್ಯಾಂಡಲ್ ಅಳವಡಿಸಿ, ಸ್ವಚ್ಛ ಮಾಡುತ್ತಾರೆ. ಲೇಬಲ್, ಟ್ಯಾಗ್ ಹಾಕಿದ ಮೇಲೆ ಬ್ಯಾಗ್ ಸಿದ್ಧವಾಗುತ್ತದೆ. ಬಳಿಕ ಕವರಿಂಗ್, ಪ್ಯಾಕಿಂಗ್ ಮಾಡಿ ಮಾರಾಟಕ್ಕೆ ಕಳಿಸುತ್ತಾರೆ. ಹೀಗೆ ಪ್ರತಿ ವಸ್ತುಗಳ ತಯಾರಿಕೆಯಲ್ಲೂ ಮಹಿಳೆಯರ ಕುಸುರಿ ಕೆಲಸ ಆಕರ್ಷಕವಾಗಿದೆ. ನಾನಾ ವಿನ್ಯಾಸ, ದೀರ್ಘ ಬಾಳಿಕೆ ಬರುವ ಇಲ್ಲಿನ ಉತ್ಪನ್ನಗಳು ಪರಿಸರ ಸ್ನೇಹಿಯಾಗಿವೆ. ಹಾಗಾಗಿ, ವಿದೇಶಿಗರು ಇವರ ವಸ್ತುಗಳಿಗೆ ಮನಸೋತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.