ಬೆಂಗಳೂರು: ಬಾಬಾ ಸಾಹೇಬ ಅಂಬೇಡ್ಕರರಿಗೆ 1920ರಿಂದ ಆರಂಭಿಸಿ ಅವರು ಪರಿನಿರ್ವಾಣ ಆಗುವವರೆಗೆ ಹೆಜ್ಜೆಹೆಜ್ಜೆಗೆ ಹಿಂದಕ್ಕೆ ತಳ್ಳಿದವರು, ಅವರನ್ನು ಅವಮಾನಿಸಿದವರು, ಅವರನ್ನು ಸೋಲಿಸಿದವರಿಗೆ ಇವತ್ತು ಡಾ. ಅಂಬೇಡ್ಕರರ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ “ಸಂವಿಧಾನ ಸನ್ಮಾನ ದಿನ”, ನಮ್ಮ ಸಂವಿಧಾನ-ನಮ್ಮ ಹೆಮ್ಮೆ ಅಭಿಯಾನದ ಅಂಗವಾಗಿ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಎನ್. ಮಹೇಶ್ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 2015ರಿಂದ ಸಂವಿಧಾನ ದಿನ ಆಚರಣೆ ನಡೆದಿದೆ. ಸಂವಿಧಾನಕ್ಕೆ ಗೌರವ ತರುವ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ನರೇಂದ್ರ ಮೋದಿಜೀ ಮಾಡಿದ್ದಾರೆ ಎಂದು ವಿವರಿಸಿದರು.
ಅಂಬೇಡ್ಕರರಿಗೆ ಅವಮಾನ ಆದಲ್ಲೆಲ್ಲ ಅದನ್ನು ಅಳಿಸಿ ಅವರಿಗೆ ಗೌರವ ತರುವ ಕೆಲಸವನ್ನು ಬಿಜೆಪಿ- ಮೋದಿಜೀ ಅವರು ಮಾಡಿದ್ದಾರೆ ಎಂದರು. ಸಂವಿಧಾನ ಬದಲಿಸಿದ್ದು ಯಾರು? ಸಂವಿಧಾನಕ್ಕೆ ಶಕ್ತಿ ತುಂಬಿದ್ದು ಯಾರೆಂಬ ವಿಷಯವನ್ನು ನಾವು ಈ ಅಭಿಯಾನದಲ್ಲಿ ಹೇಳುತ್ತಿದ್ದೇವೆ ಎಂದು ತಿಳಿಸಿದರು.
ಸಂವಿಧಾನ ಮಂಡನೆಯಾದ ದಿನವಾದ ನವೆಂಬರ್ 26ರಿಂದ ಸಂವಿಧಾನ ಜಾರಿಯಾದ ಜನವರಿ 26ರ ವರೆಗೆ 2 ತಿಂಗಳ ಕಾಲ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾ ಮಟ್ಟದ ಬಳಿಕ ಇದೀಗ ಮಂಡಲ ಮಟ್ಟದಲ್ಲಿ ಮಾಹಿತಿ ಕೊಡಲಾಗುತ್ತಿದೆ ಎಂದರು.
ಸಂವಿಧಾನಕ್ಕೆ ಇದುವರೆಗೆ 106 ತಿದ್ದುಪಡಿಗಳನ್ನು ಮಾಡಲಾಗಿದೆ. ಬಿಜೆಪಿ 22 ತಿದ್ದುಪಡಿ ಮಾಡಿದ್ದರೆ, ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ 14, ಮೋದಿಜೀ ಅವರ ಕಾಲದಲ್ಲಿ 8 ತಿದ್ದುಪಡಿ ಮಾಡಲಾಗಿದೆ. ಇವೆಲ್ಲವೂ ಸಂವಿಧಾನದ ಪರ, ಮೀಸಲಾತಿಯ ಪರ ಇದ್ದು, ಎಸ್ಸಿ, ಎಸ್ಟಿಗಳಿಗೆ, ಇತರೇ ಹಿಂದುಳಿದ ಜಾತಿಗಳಿಗೆ ಶಕ್ತಿ ತುಂಬುವ ತಿದ್ದುಪಡಿಗಳು ಎಂದು ಎನ್.ಮಹೇಶ್ ಅವರು ಹೇಳಿದರು. ಒಂದೇ ಒಂದು ತಿದ್ದುಪಡಿ ಸಂವಿಧಾನ ವಿರೋಧಿ, ಎಸ್ಸಿ ಎಸ್ಟಿ ವಿರೋಧಿ ಇದ್ದಲ್ಲಿ ಕಾಂಗ್ರೆಸ್ಸಿನವರು ತೋರಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಒಟ್ಟು 75 ತಿದ್ದುಪಡಿ ಮಾಡಿದೆ. 1951ರಲ್ಲಿ ಅಧಿಕೃತ ಸರಕಾರ ಇರಲಿಲ್ಲ; ಬ್ರಿಟಿಷರು ನೇಮಿಸಿದ ಸರಕಾರ ಅಧಿಕಾರದಲ್ಲಿತ್ತು. ಇಂಥ ಸಂದರ್ಭದಲ್ಲಿ ಸಂವಿಧಾನಕ್ಕೆ ಮೊದಲನೇ ತಿದ್ದುಪಡಿ ಮಾಡಿದವರು ಜವಾಹರಲಾಲ್ ನೆಹರೂ ಎಂದು ಟೀಕಿಸಿದರು. ಮಾಧ್ಯಮಗಳನ್ನು ನಿಯಂತ್ರಣ ಮಾಡಲು ಅಭಿವ್ಯಕ್ತಿ ಸ್ವಾತಂತ್ರ್ಯ ನಿಯಂತ್ರಿಸುವ ತಿದ್ದುಪಡಿ ಇದಾಗಿತ್ತು ಎಂದರು.
ಸುಳ್ಳು ಊರೆಲ್ಲ ಸುತ್ತಿ ಬರುವ ಹೊತ್ತಿಗೆ ಸತ್ಯ ಹೊಸಲು ದಾಟಿರಲಿಲ್ಲ ಎಂಬ ಗಾದೆ ಮಾತನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ಪಕ್ಷವು ನಮ್ಮ ವಿರುದ್ಧ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ; ಬಿಜೆಪಿಯವರು ಡಾ.ಅಂಬೇಡ್ಕರರ ವಿರೋಧಿ; ಬಿಜೆಪಿ ದಲಿತ ವಿರೋಧಿ ಎಂಬ ಸುಳ್ಳು ನರೇಟಿವ್ ಸೃಷ್ಟಿಸುತ್ತಿದ್ದಾರೆ. ಅದರ ಬದಲು ಸತ್ಯವನ್ನು ತಿಳಿಸುವ ಅಭಿಯಾನ ಇದಾಗಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 38, 39, 40, 41, 42 ತಿದ್ದುಪಡಿ ಮಾಡಿದ್ದು, ಅವೆಲ್ಲವೂ ಕರಾಳ ತಿದ್ದುಪಡಿಗಳು. ವ್ಯಕ್ತಿ ಸ್ವಾತಂತ್ರ್ಯ ಹರಣ, ಜೀವಿಸುವ ಸ್ವಾತಂತ್ರ್ಯ ಹರಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ, ನ್ಯಾಯಾಲಯ ನಿಯಂತ್ರಣ ಮಾಡುವ ತಿದ್ದುಪಡಿ ಮಾಡಿದ್ದರು ಎಂದು ಮಹೇಶ್ ಅವರು ಆಕ್ಷೇಪಿಸಿದರು.
ಪ್ರಧಾನಮಂತ್ರಿಗಳನ್ನು ನ್ಯಾಯಾಲಯ ಪ್ರಶ್ನಿಸುವಂತಿಲ್ಲ ಎಂಬ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. 21 ತಿಂಗಳ ಕಾಲ ಸಂವಿಧಾನವನ್ನು ಅಮಾನತಿನಲ್ಲಿಟ್ಟು ಅವಮಾನಿಸಿದ್ದಾರೆ. ಇವತ್ತು ಕಾಂಗ್ರೆಸ್ಸಿಗರು ಸಂವಿಧಾನದ ಕುರಿತು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.