ಟೊರೆಂಟೋ: ಮಿಲ್ಟನ್ ಟೌನ್ನಲ್ಲಿ ಅಕ್ಟೋಬರ್ 27 ರಂದು ನಡೆದ ಶೂಟೌಟ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದ ಪೊಲೀಸರು ಅರ್ಶ್ ದಲ್ಲಾ ಎಂದು ಕುಖ್ಯಾತಿ ಪಡೆದ ಅರ್ಶ್ದೀಪ್ ಸಿಂಗ್ನನ್ನು ಬಂಧಿಸಿದ್ದಾರೆ. ಈತ ಖಲಿಸ್ಥಾನಿ ಸಂಘಟನೆಯ ಮುಖಂಡನಾಗಿದ್ದು, ನಿಜ್ಜರ್ ಬಳಿಕ ಅದ ಉಸ್ತುವಾರಿ ವಹಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮಿಲ್ಟನ್ ಟೌನ್ನಲ್ಲಿ ನಡೆದ ಸಶಸ್ತ್ರ ಸಜ್ಜಿತ ಘರ್ಷಣೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ ದಲ್ಲಾನನ್ನು ಬಂಧಿಸಲಾಗಿರುವ ಬಗ್ಗೆ ಭಾರತೀಯ ಭದ್ರತಾ ಏಜೆನ್ಸಿಗಳ ಮೂಲಗಳು ಖಚಿತಪಡಿಸಿವೆ.
ಭಾರತೀಯ ಗುಪ್ತಚರ ಸಂಸ್ಥೆಗಳ ಪ್ರಕಾರ, ಭಾರತದಲ್ಲಿ ವಿವಿಧ ಅಪರಾಧ ಚಟುವಟಿಕೆಗಳಿಗೆ ಬೇಕಾಗಿರುವ ಅರ್ಶ್ ದಲ್ಲಾ ತನ್ನ ಹೆಂಡತಿಯೊಂದಿಗೆ ಕೆನಡಾದಲ್ಲಿ ವಾಸಿಸುತ್ತಿದ್ದಾನೆ. ಕೆನಡಾದ ಕಾನೂನು ಜಾರಿ ಸಂಸ್ಥೆಗಳು, ವಿಶೇಷವಾಗಿ ಹಾಲ್ಟನ್ ಪ್ರಾದೇಶಿಕ ಪೊಲೀಸ್ ಸೇವೆ (HRPS) ಇತ್ತೀಚಿನ ಶೂಟೌಟ್ನ ತನಿಖೆ ನಡೆಸುತ್ತಿದ್ದು ಈ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದೆ.
ಭಾರತೀಯ ಅಧಿಕಾರಿಗಳು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಹೆಚ್ಚಿನ ವಿವರಗಳಿಗಾಗಿ ಕೆನಡಾದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಲ್ಲಾ ಖಲಿಸ್ತಾನಿ ಟೈಗರ್ ಫೋರ್ಸ್ನ ಹಂಗಾಮಿ ಮುಖ್ಯಸ್ಥನಾಗಿದ್ದ ಮತ್ತು ಕೊಲ್ಲಲ್ಪಟ್ಟ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ನ ಉತ್ತರಾಧಿಕಾರಿಯಾಗಿದ್ದ ಎನ್ನಲಾಗಿದೆ.
ಈ ವರ್ಷದ ಸೆಪ್ಟೆಂಬರ್ನಲ್ಲಿ, ಪಂಜಾಬ್ನ ಮೋಗಾ ಜಿಲ್ಲೆಯ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಕಾಂಗ್ರೆಸ್ ನಾಯಕ ಬಲ್ಜಿಂದರ್ ಸಿಂಗ್ ಬಲ್ಲಿ ಅವರ ಹತ್ಯೆಯ ಹೊಣೆಯನ್ನು ಕೂಡ ದಲ್ಲಾ ವಹಿಸಿಕೊಂಡಿದ್ದ. “ಬಲ್ಜಿಂದರ್ ಸಿಂಗ್ ಬಲ್ಲಿ ನನ್ನ ಭವಿಷ್ಯವನ್ನು ಹಾಳುಮಾಡಿದ್ದಾನೆ ಮತ್ತು ಗ್ಯಾಂಗ್ಸ್ಟರ್ ಜಗತ್ತಿಗೆ ಕಾಳಿಡುವಂತೆ ಮಾಡಿದ್ದಾನೆ. ತನ್ನ ತಾಯಿಯ ಪೊಲೀಸ್ ಕಸ್ಟಡಿ ಹಿಂದೆ ಕಾಂಗ್ರೆಸ್ ಮುಖಂಡನ ಕೈವಾಡವಿದೆ, ಇದು ಸೇಡು ತೀರಿಸಿಕೊಳ್ಳಲು ನನಗೆ ಪ್ರೇರೇಪಿಸಿತು” ಎಂದು ಸೋಶೀಯಲ್ ಮೀಡಿಯಾ ಪೋಸ್ಟ್ನಲ್ಲಿ ದಲ್ಲಾ ಹೇಳಿಕೊಂಡಿದ್ದಾನೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಭಯೋತ್ಪಾದಕರ ಪಟ್ಟಿಯಲ್ಲಿರುವ ವಾಂಟೆಡ್ ಅಪಾರಧಿಯಾಗಿರುವ ಅರ್ಶ್ ದಲ್ಲಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆನಡಾದಲ್ಲಿರುವ ತನ್ನ ನೆಲೆಯಿಂದ ಪಂಜಾಬ್ನಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ. ಪಂಜಾಬ್ ಮೊಗಾದವನಾದ ದಲ್ಲಾ ಪಂಜಾಬ್ನಲ್ಲಿ ಅನೇಕ ಹತ್ಯೆಗಳನ್ನು ನಡೆಸಿದ ಆರೋಪ ಹೊತ್ತುಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.