ಬೆಂಗಳೂರು: ಮೈಸೂರು ‘ಮುಡಾ’ ಹಗರಣದ ಸಂಬಂಧ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದೆ ಲೋಕಾಯುಕ್ತದ ಮುಂದೆ ತನಿಖೆಗೆ ಹಾಜರಾದ ವಿಚಾರ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಶಿಗ್ಗಾಂವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಸಿದ್ದರಾಮಯ್ಯನವರು ತಕ್ಷಣ ರಾಜೀನಾಮೆ ಕೊಡಬೇಕು. ಈ ತನಿಖೆ ಸ್ಟೇಜ್ ಮ್ಯಾನೇಜ್ಡ್ ವಿಚಾರ ಎಂದು ಟೀಕಿಸಿದರು. ಇವರೇ ಸ್ಕ್ರಿಪ್ಟ್ ಬರೆದುಕೊಟ್ಟು, ಆ ಕಡೆಯಿಂದ ಓದಿಸಿ, ಇವರೇ ಉತ್ತರ ಕೊಟ್ಟು ಇಷ್ಟೇ ಕಾಲದಲ್ಲಿ ಹೊರಬರುತ್ತಾರೆಂದು ಟಿ.ಪಿ.ಯೇ ಹೇಳುತ್ತಿದೆ. ಇಷ್ಟೇ ಸಮಯಕ್ಕೆ ಪ್ರಾರಂಭ, ಇಷ್ಟೇ ಪ್ರಶ್ನೆ ಕೇಳುತ್ತಾರೆಂದು ನಿಮಗೆ ಗೊತ್ತೇ ಸಿಎಂ ಅವರೇ ಎಂದು ಪ್ರಶ್ನಿಸಿದರು. ಇದರಿಂದ ಅವರು ಅಪರಾಧಿ ಅನ್ನಿಸುವುದೂ ಇಲ್ಲ. ಆಗುವುದೂ ಇಲ್ಲ ಎಂದು ನುಡಿದರು.
ಸರಕಾರಿ ಕಾರು ಬಳಸಿ, ಸಿಬ್ಬಂದಿ ಕರೆದುಕೊಂಡು ಹೋಗಿ ಲೋಕಾಯುಕ್ತದ ಮುಂದೆ ಇಳಿದಿದ್ದೀರಿ. ಅಧಿಕಾರಿಗಳಿಗೆ ನಿಮ್ಮನ್ನು ಕಂಡು ಭಯ ಬಂದಿರಲೇ ಬೇಕು ಎಂದು ವಿಶ್ಲೇಷಿಸಿದರು. ಅಧಿಕಾರದಲ್ಲಿರುವ ಸಿಎಂ ಆಗಿ ಅವರು ಲೋಕಾಯುಕ್ತದ ಮುಂದೆ ತನಿಖೆಗೆ ಹಾಜರಾಗಿದ್ದಾರೆ. ಇದು ಅವರಿಗೆ, ರಾಜ್ಯಕ್ಕೆ ಗೌರವ ತರುವುದಿಲ್ಲ ಎಂದರು. ಅವರು ರಾಜೀನಾಮೆ ನೀಡಬೇಕಿತ್ತೆಂದು ಜನರು ಹೇಳುತ್ತಿದ್ದಾರೆ; ಅವರಿಗೆ ಏನೂ ಅನಿಸಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ (ಟಿ.ಪಿ.) ನೋಡಿದ್ದೇನೆ. 9.30ಕ್ಕೆ ಮೈಸೂರು ತಲುಪುತ್ತಾರೆ. 10 ಗಂಟೆಯಿಂದ ತನಿಖೆ, 12 ಗಂಟೆಗೆ ಚನ್ನಪಟ್ಟಣಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇದು ಪೂರ್ವ ನಿಯೋಜಿತವಲ್ಲವೇ? 72 ಪ್ರಶ್ನೆ ಕೇಳಲು ಸಾಧ್ಯವೇ? ಏನು ಕೇಳಲು ಸಾಧ್ಯ? ಎಂದ ಅವರು, ಲೋಕಾಯುಕ್ತ ತನಿಖೆಯಿಂದ ಸತ್ಯ ಹೊರಬರಲು ಇದರಿಂದ ಸಾಧ್ಯವಿಲ್ಲ. ಈ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಸಂಸ್ಥೆ ನಡೆಸುವ ಯಜಮಾನನನ್ನು ಆ ಸಂಸ್ಥೆಯ ಕೆಲಸಗಾರರು, ನಾನು ತಪ್ಪು ಮಾಡಿದ್ದೇನೆ ಎಂದಾಗ ಏನೆಂದು ಪ್ರಶ್ನೆ ಮಾಡಬಲ್ಲರು? ಪ್ರಶ್ನಿಸುವ ಧೈರ್ಯ ಬರಲು ಸಾಧ್ಯವೇ? ತನಿಖೆ ಮಾಡಿ ಒಳ್ಳೆಯ ವರದಿ ಕೊಡಲು ಸಾಧ್ಯವೇ? ಇದನ್ನು ಸಾಮಾನ್ಯ ಜನರೂ ಯೋಚಿಸುತ್ತಾರೆ ಎಂದು ವಿಶ್ಲೇಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.