ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 9 ಮಂದಿ ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ಬಹು ಮಹತ್ವದ ತೀರ್ಪೋಂದನ್ನು ಪ್ರಕಟಿಸಿದೆ. ಸಾರ್ವಜನಿಕರ ಒಳಿತಿಗಾಗಿ ಖಾಸಗೀ ಮಾಲಿಕತ್ವದ ಎಲ್ಲಾ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಚಾರಿತ್ರಿಕ ತೀರ್ಪು ಪ್ರಕಟಿಸಿದೆ. ಕೆಲವೊಂದು ಸಂದರ್ಭದಲ್ಲಿ ಮಾತ್ರ ಖಾಸಗಿ ಸೊತ್ತುಗಳ ಮೇಲೆ ಹಕ್ಕು ಸಾಧಿಸಬಹುದು ಎಂದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠ, 7:2 ಅನುಪಾತದಲ್ಲಿ ಬಹುಮತದ ತೀರ್ಪು ನೀಡಿದೆ.
ಈ ಮೂಲಕ ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸಾರ್ವಜನಿಕರ ಒಳಿತಿಗಾಗಿ ವಿತರಣೆ ಮಾಡಲು ರಾಜ್ಯಗಳು ಸ್ವಾಧೀನಪಡಿಸಿಕೊಳ್ಳಬಹುದು ಎಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಪೀಠದ ಹಿಂದಿನ ತೀರ್ಪನ್ನು ಪೀಠ ತಳ್ಳಿಹಾಕಿದೆ.
ಸಾರ್ವಜನಿಕ ಒಳಿತಿಗೆ ಪೂರಕವಾಗುವ ರೀತಿ ಸಮುದಾಯದ ಭೌತಿಕ ಸಂಪನ್ಮೂಲಗಳ ಮಾಲಿಕತ್ವ ಮತ್ತು ನಿಯಂತ್ರಣಗಳ ವಿತರಣೆಯಾಗಬೇಕು ಮತ್ತು ಇದಕ್ಕೆ ಪೂರಕವಾಗಿ ರಾಜ್ಯಗಳು ತಮ್ಮ ನೀತಿಗಳನ್ನು ರಚಿಸಬೇಕು ಎಂದು ಪರಿಚ್ಛೇದ 39(ಬಿ) ಅಡಿಯಲ್ಲಿ ಹೇಳಲಾಗಿದೆ.
ಹಾಗಾಗಿ ಪರಿಚ್ಛೇದ 39(ಬಿ) ಅಡಿಯಲ್ಲಿ ಹೇಳಲಾಗಿರುವಂತೆ ಸಮುದಾಯದ ಭೌತಿಕ ಸಂಪನ್ಮೂಲಗಳ ವ್ಯಾಖ್ಯಾನ ವ್ಯಾಪ್ತಿಯಲ್ಲಿ ಖಾಸಗಿ ಮಾಲಿಕತ್ವದ ಸಂಪನ್ಮೂಲಗಳು ಕೂಡ ಒಳಗೊಳ್ಳುವುದೇ ಎಂಬುದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮುಂದಿಟ್ಟ ಪ್ರಶ್ನೆಯಾಗಿತ್ತು.
ಇದಕ್ಕೆ ತಾತ್ವಿಕ ಉತ್ತರ ಹೌದು ಎಂದಾಗಿದೆ. ಖಾಸಗಿ ಮಾಲಿಕತ್ವದ ಸಂಪನ್ಮೂಲಗಳು ಕೂಡ ಇಲ್ಲಿ ಸಮುದಾಯದ ಭೌತಿಕ ಸಂಪನ್ಮೂಲ ವ್ಯಾಪ್ತಿಯಲ್ಲಿ ಬರುವ ಸಾಧ್ಯತೆಯಿದೆ. ಆದರೂ ಇದೇ ವಿಚಾರದಲ್ಲಿ ರಂಗಾರೆಡ್ಡಿ ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣ ಐಯ್ಯರ್ 1978ರಲ್ಲಿ ನೀಡಿದ್ದ ತೀರ್ಪಿಗೆ ಸಹಮತ ಹೊಂದಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ವ್ಯಕ್ತಿಯೋರ್ವ ಹೊಂದಿರುವ ಪ್ರತಿಯೊಂದು ಸಂಪನ್ಮೂಲವೂ ಆತನ ಭೌತಿಕ ಆವಶ್ಯಕತೆಗಳಿಗೆ ಸ್ಪಂದಿಸುವ ಮಾಧ್ಯಮಗಳಾಗಿವೆ. ಹಾಗಾಗಿ ಆತನ ಎಲ್ಲಾ ಸಂಪನ್ಮೂಲಗಳೂ ಸಮುದಾಯದ ಅಥವಾ ಸಾರ್ವಜನಿಕ ಭೌತಿಕ ಸಂಪನ್ಮೂಲವೆಂದು ಪರಿಗಣಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.