ಬೆಂಗಳೂರು: ದೇಶ ಕಂಡ ಧೀಮಂತ ನಾಯಕ, ಈ ದೇಶದ ಮೊದಲ ಗೃಹ ಸಚಿವ ‘ಉಕ್ಕಿನ ಮನುಷ್ಯ’ ಎಂದೇ ಖ್ಯಾತರಾಗಿದ್ದ ಭಾರತರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ, ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಐಕ್ಯತಾ ಓಟವನ್ನು ಏರ್ಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
“ಐಕ್ಯತಾ ಓಟವು” ಬೆಳಿಗ್ಗೆ “ಗೇಟ್ ನಂ.2, ಕಂಠೀರವ ಕ್ರೀಡಾಂಗಣ”ದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ದೇಶದ ಐಕ್ಯತೆಗೆ ತಮ್ಮದೇ ಆದ ರೀತಿಯಲ್ಲಿ ಸೇವೆ ಮಾಡಿದವರು. ದೇಶದ ಅಖಂಡತೆಗೂ ವಿಶಿಷ್ಟ ಕೊಡುಗೆ ನೀಡಿದರು ಎಂದು ವಿಶ್ಲೇಷಿಸಿದರು.
ಅವರ ಸ್ಮರಣೆ, ಅವರು ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಮುಂದಿನ ಪೀಳಿಗೆಗೂ ತಿಳಿಸುವ ಸದುದ್ದೇಶವನ್ನು ಐಕ್ಯತಾ ಓಟ (ರನ್ ಫಾರ್ ಯುನಿಟಿ) ಹೊಂದಿದೆ ಎಂದು ವಿವರಿಸಿದರು. ದೀಪಾವಳಿಯ ನಿಮಿತ್ತ ಮುಂಚಿತವಾಗಿ ಇವತ್ತೇ ಐಕ್ಯತಾ ಓಟ ಆಯೋಜಿಸಿದ್ದೇವೆ ಎಂದು ತಿಳಿಸಿದರು. ಇದರಲ್ಲಿ ರಾಜಕೀಯ ಏನೂ ಇಲ್ಲ ಎಂದರು.
ದೇಶದ ಏಕತೆ, ಅಖಂಡತೆ ಬಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಇದ್ದ ಕನಸನ್ನು ಇಂದಿನ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನಸಾಗಿ ಮಾಡುತ್ತಿದ್ದಾರೆ. ಅವರ ಕರೆಯ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದಾಗಿ ತಿಳಿಸಿದರು. ಭಾರತವನ್ನು 2047ರ ಹೊತ್ತಿಗೆ ವಿಕಸಿತ ಭಾರತ ಮಾಡುವ ಸಂಕಲ್ಪ ನಮ್ಮ ಪ್ರಧಾನಿ ಮೋದಿಜೀ ಅವರದು. ಆ ಸಂಕಲ್ಪ ಈಡೇರಿಸಲು ದೇಶದ ಅಖಂಡತೆಯೂ ಅಷ್ಟೇ ಮುಖ್ಯ ಎಂದು ವಿಶ್ಲೇಷಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಪಟೇಲರು ಕರ್ನಾಟಕದಲ್ಲೂ ನಿಜಾಮ್ ಆಡಳಿತವನ್ನು ರದ್ದು ಮಾಡಿ, ದಂಗೆ, ಅತ್ಯಾಚಾರ, ಅನಾಚಾರಗಳನ್ನು ನಿಲ್ಲಿಸಿ ಭಾರತವನ್ನು ಒಂದುಗೂಡಿಸಿದವರು ಎಂದು ವಿವರಿಸಿದರು. ಅವರ 150 ವರ್ಷದ ಜನ್ಮದಿನವನ್ನು ನಾವು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು. ದೇಶದ ಏಕತೆ, ದೇಶ ಮುನ್ನಡೆಸಲು, ಅಭಿವೃದ್ಧಿಗಾಗಿ ಈ ಓಟ ಎಂದರು.
ಶಾಸಕರಾದ ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ರಘು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.