ಬೆಂಗಳೂರು: ಬಿಜೆಪಿ ನಿಲುವು ಅತ್ಯಂತ ಸ್ಪಷ್ಟವಾಗಿದೆ. ವಕ್ಫ್ ಕಾಯಿದೆ ಹೆಸರು ಹೇಳಿಕೊಂಡು ರೈತರು ಬೀದಿಪಾಲಾಗಬಾರದು. ಆ ನಿಟ್ಟಿನಲ್ಲಿ ಸರಕಾರ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಿಜೆಪಿ ಯಾವ ಹಂತಕ್ಕೆ ಹೋಗಲೂ ಸಿದ್ಧವಿದೆ ಎಂದು ಪ್ರಕಟಿಸಿದರು. ನಾವು ಹೋರಾಟಕ್ಕೂ ಇಳಿಯುತ್ತೇವೆ; ಆದರೆ, ರೈತರಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ವಕ್ಫ್ ಕಾಯಿದೆ ಹೆಸರಿನಲ್ಲಿ ರೈತರ ಜಮೀನನ್ನು ಹೊಡೆದುಕೊಳ್ಳುವ ಹುನ್ನಾರವೂ ನಡೆಯುತ್ತಿದೆ. ಮೊನ್ನೆ ವಿಜಾಪುರದಲ್ಲಿ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿದ್ದಾರೆ. ರೈತರು ಹಲವಾರು ದಶಕಗಳಿಂದ ಕೃಷಿ ಮಾಡುತ್ತಿದ್ದ ಜಮೀನು ಕೂಡ ವಕ್ಫ್ ಆಸ್ತಿ ಎಂದು ಅಧಿಕಾರಿಗಳ ಮೂಲಕ ನೋಟಿಸ್ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಸದಾ ತುಷ್ಟೀಕರಣ ಮಾಡುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಬೆಂಬಲ ವಕ್ಫ್ ಬೋರ್ಡ್ಗೆ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಟೀಕಿಸಿದರು.
ಈಗಾಗಲೇ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದ ಎನ್ಡಿಎ ಸರಕಾರವು ವಕ್ಫ್ ಕಾಯಿದೆಯಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಇದ್ಯಾವುದೂ ಇಲ್ಲ; ವಕ್ಫ್ ಹೆಸರು ಹೇಳಿಕೊಂಡು ಯಾರೇನು ಬೇಕಾದರೂ ಲೂಟಿ ಮಾಡಬಹುದು ಎಂಬಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯಾರಿಗೂ ಅನ್ಯಾಯ ಆಗಬಾರದು. ವಕ್ಫ್ ಕಾಯಿದೆಗೆ ಸುಧಾರಣೆ ತರಬೇಕು ಎಂದು ಕೇಂದ್ರ ಸರಕಾರ ಸಮಿತಿಯನ್ನು ರಚಿಸಿ ನಿನ್ನೆ- ಮೊನ್ನೆ ಚರ್ಚೆಯೂ ಆಗಿದೆ. ಆದರೆ, ಕರ್ನಾಟಕದ ವಿಜಾಪುರದಲ್ಲಿ ನಿನ್ನೆ ರೈತರು ಕಮಿಟಿ ಸದಸ್ಯರಾದ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿದ್ದಾರೆ ಎಂದು ವಿವರಿಸಿದರು.
3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆ ಆಗಿದ್ದು, ನಾಮಪತ್ರ ಸಲ್ಲಿಕೆಯೂ ಆಗಿದೆ. ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರಿನಲ್ಲಿ ಯಾವ ರೀತಿ ಆಡಳಿತ ವಿರೋಧಿ ಅಲೆ ಇದೆ; ರಾಜ್ಯ ಸರಕಾರದ ವಿರುದ್ಧ ಜನರು ಯಾವ ರೀತಿ ಹಿಡಿಶಾಪ ಹಾಕುತ್ತಿದ್ದಾರೆ ಎಂಬುದು ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ವಿಶ್ಲೇಷಣೆ ಮಾಡಿದರು.
ಉಪ ಚುನಾವಣೆ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಪಕ್ಷದವರು ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಷ್ಟವಾಗಲಿದೆ. ಅಂಥ ವಾತಾವರಣ ನಿರ್ಮಾಣ ಆಗಲಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಈಗಾಗಲೇ ಬೊಬ್ಬೆ ಹೊಡೆಯುತ್ತಿದ್ದಾರೆ. ಅಭಿವೃದ್ಧಿಗೆ ಹಣ ಕೊಡದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜು ಕಾಗೆಯವರು ಹೇಳಿದ್ದಾರೆ. 8 ಬಾರಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ಕೂಡ ಅನುದಾನ ಸಿಗುತ್ತಿಲ್ಲ ಎಂಬ ಮಾತು ಹೇಳಿದ್ದಾರೆ. ಮತ್ತೊಂದೆಡೆ ಬಿ.ಆರ್.ಪಾಟೀಲ್ ಅವರು ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂದಿದ್ದಾರೆ ಎಂದು ವಿವರಿಸಿದರು.
ರಾಜ್ಯದಲ್ಲಿ ಮಳೆ ಹೆಚ್ಚಾಗಿ ನೆರೆ ಪರಿಸ್ಥಿತಿ ತೀವ್ರವಾಗಿದೆ. ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಭತ್ತ, ಜೋಳ, ಹತ್ತಿ, ಶೇಂಗಾ, ಈರುಳ್ಳಿ ಬೆಳೆ ನಷ್ಟದಿಂದ ರೈತರು ಸಂಕಷ್ಟದಲ್ಲಿದ್ದಾರೆ. 3 ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ಸರಕಾರವು ಸಂಡೂರಿಗೆ 10 ಸಚಿವರು, ಶಿಗ್ಗಾವಿಗೆ 10 ಸಚಿವರು ಮತ್ತು ಚನ್ನಪಟ್ಟಣದಲ್ಲಿ 10 ಸಚಿವರನ್ನು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 20-30 ಜನ ಶಾಸಕರನ್ನು ನೇಮಿಸಿದೆ. ಹಣದ ಮೂಟೆ ಇಟ್ಟುಕೊಂಡು ಉಪ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆಯೇ ಹೊರತು ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜ್ಯ ಸರಕಾರಕ್ಕೆ ರೈತರ ಸಂಕಷ್ಟ ಕಣ್ಣಿಗೆ ಕಾಣುತ್ತಿಲ್ಲ ಎಂದು ಆಕ್ಷೇಪಿಸಿದರು.
ರೈತರು ಪರದಾಡುತ್ತಿದ್ದು, ಅವರ ಸಮಸ್ಯೆಗೆ ಸ್ಪಂದಿಸಬೇಕೆಂದು ರಾಜ್ಯ ಸರಕಾರಕ್ಕೆ ಅನಿಸುತ್ತಿಲ್ಲ; ಉಪ ಚುನಾವಣೆ ಬಗ್ಗೆ ಕಾಳಜಿ ಇದೆಯೇ ಹೊರತು ನಾಡಿನ ರೈತರ ಬಗ್ಗೆ ಚಿಂತನೆ ಮಾಡದೆ ಇರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು. ಈ ಸರಕಾರದ ವಿಷಯ ಬಂದಾಗ ಅಭಿವೃದ್ಧಿ ಎಂಬುದನ್ನು ಚರ್ಚೆ ಮಾಡಿಯೂ ಉಪಯೋಗ ಇಲ್ಲ. ಬೆಂಗಳೂರಿನಲ್ಲಿ ಕಾರಿನ ಬದಲು ದೋಣಿ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಒಂದು ಚುನಾಯಿತ ಸರಕಾರ ಇದೆ; ಅಭಿವೃದ್ಧಿ ಆಗಲಿದೆ ಎಂಬ ನಿರೀಕ್ಷೆ ಜನರಲ್ಲೂ ಇಲ್ಲವಾಗಿದೆ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಕರ್ನಾಟಕ ಇದೆ ಎಂದು ವಿವರಿಸಿದರು.
ಬೆಂಗಳೂರಿನ ತೀವ್ರ ಮಳೆ, ಸಮಸ್ಯೆ ಸಂದರ್ಭದಲ್ಲಿ ವಿಪಕ್ಷ ನಾಯಕರು, ಇತರ ಪ್ರಮುಖರು ಸ್ಥಳಕ್ಕೆ ಭೇಟಿ ಮಾಡಿದ್ದಾರೆ. ರೈತರ ಸಮಸ್ಯೆ ಇರುವಲ್ಲಿಗೆ ಕೂಡ ಭೇಟಿ ಮಾಡುತ್ತೇವೆ. ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ಮಾಡುತ್ತೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಸರಕಾರ ದನ ಕಾಯುತ್ತ ಇದೆಯೇ? ಕತ್ತೆ ಕಾಯಲು ಇವರನ್ನು ಆಯ್ಕೆ ಮಾಡಿದ್ದಾರಾ? ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ನಡೆದುಕೊಳ್ಳುವ ರೀತಿ ಇದುವೇ? ಹಿಂದೆ ಬಿಜೆಪಿ ಸರಕಾರ ಇದ್ದಾಗ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರು ಮನೆ ಕಳೆದುಕೊಂಡರೆ 5 ಲಕ್ಷ ರೂ. ಕೊಡುತ್ತಿದ್ದರು. ಇವರೇನು ಮಾಡಿದ್ದಾರೆ? ಇವರು ಒಂದು ಲಕ್ಷ ಕೊಡಲೂ ಮೀನಾಮೇಷ ನೋಡುತ್ತಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ಇವರು ಬಡವರ ಪರ ಇರುವ ಸರಕಾರ ಎನ್ನುತ್ತಾರೆ. ಒಂದು ಲಕ್ಷ ಕೊಡಲೂ ಯೋಚನೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಮನೆ ಕಳಕೊಂಡ ಬಡವರು ಪರದಾಡುತ್ತಿದ್ದಾರೆ. ರೈತರ ಸಮಸ್ಯೆ ಹೇಳಿದರೆ ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ. ಇವರನ್ನು ಜನರು ಗೆಲ್ಲಿಸಿದ್ದು ಯಾತಕ್ಕೆ ಎಂದು ಪ್ರಶ್ನಿಸಿದರು.
ಎಲ್ಲವನ್ನೂ ಕೇಂದ್ರ ಸರಕಾರ ಮಾಡಬೇಕಿದ್ದರೆ ರಾಜ್ಯ ಸರಕಾರದ ಜವಾಬ್ದಾರಿ ಏನು? ಮುಖ್ಯಮಂತ್ರಿ, ಸಚಿವರು, ಆಡಳಿತ ಪಕ್ಷದವರಿಗೆ ಜವಾಬ್ದಾರಿ ಇಲ್ಲವೇ ಎಂದು ಕೇಳಿದರು. ವಿಪಕ್ಷದವರು ಪ್ರಶ್ನಿಸಿದರೆ ಕೇಂದ್ರ ಸರಕಾರದ ಕಡೆ ತೋರಿಸುತ್ತಾರೆ. ಹಾಗಿದ್ದರೆ ರಾಜ್ಯ ಸರಕಾರ ಯಾಕೆ ಇದೆ? ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.