ಬೆಂಗಳೂರು: ಈ ನಾಡಿನ ಜನವಿರೋಧಿ, ಬಡವರ ವಿರೋಧಿ, ರೈತವಿರೋಧಿ, ದಲಿತ ವಿರೋಧಿ ಕಾಂಗ್ರೆಸ್ ಸರಕಾರ ಏನಿದೆಯೋ ಇದಕ್ಕೆ ತಕ್ಕ ಪಾಠ ಕಲಿಸಲು 3 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತೀರ್ಮಾನ ಹಾಗೂ ಸಂಕಲ್ಪ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಸಂಡೂರಿನಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಡೂರಿನಲ್ಲಿ ಬಿಜೆಪಿ ಯುವ ಮುಖಂಡ ಬಂಗಾರು ಹನುಮಂತು ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಇವತ್ತು ನಾಮಪತ್ರ ಸಲ್ಲಿಸುತ್ತಿದ್ದಾರೆ. ಸಂಡೂರಿನಲ್ಲಿ ನಮ್ಮೆಲ್ಲ ಪಕ್ಷದ ಹಿರಿಯರು ಸೇರಿದ್ದಾರೆ. ಬಿಜೆಪಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದೆ. ಜೆಡಿಎಸ್ ಪಕ್ಷವೂ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.
ಸಂಡೂರಿನಲ್ಲಿ ಹಿಂದೆಂದೂ ಬಿಜೆಪಿ ಕಮಲ ಅರಳಿಲ್ಲ. ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ ರೆಡ್ಡಿ, ಎಲ್ಲ ಶಾಸಕರು, ಮಾಜಿ ಶಾಸಕರ, ವಿಧಾನಪರಿಷತ್ ಸದಸ್ಯರ, ಪಕ್ಷದ ಹಿರಿಯರ ಶ್ರಮದಿಂದ ಮೊದಲ ಬಾರಿಗೆ ಇಲ್ಲಿ ನಿಶ್ಚಿತವಾಗಿ ಬಿಜೆಪಿಯ ಕಮಲದ ಹೂ ಅರಳಲಿದೆ. ನಮ್ಮೆಲ್ಲರ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಬಿಜೆಪಿ- ಜೆಡಿಎಸ್ ಶ್ರಮದಿಂದ ಗೆಲುವು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿಯವರು ನಾಮಪತ್ರ ಸಲ್ಲಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ರಾಜ್ಯದ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ. ಸಂಡೂರಿನಲ್ಲಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಮತ್ತು ಯುವ ಮುಖಂಡ ಬಂಗಾರು ಹನುಮಂತು ಅವರು ಎಲ್ಲ ಪ್ರಮುಖರ ಸಮ್ಮುಖದಲ್ಲಿ ಇವತ್ತು ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.
ರಾಜ್ಯ ರಾಜಕೀಯದ ದಿಕ್ಸೂಚಿಯನ್ನು ಬದಲಿಸುವ ಶಕ್ತಿ ಈ 3 ಕ್ಷೇತ್ರಗಳ ಉಪ ಚುನಾವಣೆಗೆ ಇದೆ. ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಳು ರಾಜಕೀಯ ದಿಕ್ಕನ್ನು ಬದಲಿಸುವ ಶಕ್ತಿ ಹೊಂದಿವೆ. ರಾಜ್ಯದಲ್ಲಿ ರೈತರ ವಿರೋಧಿ ಸರಕಾರ ಇದೆ. ಬರಗಾಲ ಇದ್ದಾಗಲೂ ಈ ಸರಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ನೆರೆ ಇದ್ದರೂ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಮೆಕ್ಕೆಜೋಳ, ಮೆಣಸಿನ ಕಾಯಿ, ಹತ್ತಿ ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡಿ ಕುಳಿತಿದೆಯೇ ವಿನಾ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕತೆಯನ್ನು ತೋರಿಸುತ್ತಿಲ್ಲ. ಸಿದ್ದರಾಮಯ್ಯರದು ರೈತವಿರೋಧಿ, ಬಡವರ ವಿರೋಧಿ ಸರಕಾರ. ಮತ್ತೊಂದು ಕಡೆ ಎಸ್ಇಪಿ, ಟಿಎಸ್ಪಿ ಹಣವನ್ನು ಬೇರೆ ಬೇರೆ ಕಾರ್ಯಕ್ರಮಗಳಿಗೆ ವರ್ಗಾಯಿಸಿದ್ದಾರೆ. ಅಹಿಂದ ಹೆಸರು ಹೇಳಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿಯೇ ಆರಂಭವಾಗದ ಕಾರಣ ಶಾಸಕರು ತಲೆ ಎತ್ತಿಕೊಂಡು ಕ್ಷೇತ್ರದಲ್ಲಿ ಓಡಾಡಲು ಸಾಧ್ಯ ಆಗುತ್ತಿಲ್ಲ. ಈ ಸರಕಾರ ಬಂದ ಬಳಿಕ ಅನುದಾನ ಸಿಗುತ್ತಿಲ್ಲವೆಂದು ಸ್ವತಃ ಆರ್.ವಿ.ದೇಶಪಾಂಡೆ ಅವರಂಥ ಹಿರಿಯ ಶಾಸಕರು ಹೇಳಿಕೆ ಕೊಟ್ಟರು. ಕಾಂಗ್ರೆಸ್ ಪಕ್ಷದ ಶಾಸಕ ರಾಜು ಕಾಗೆಯವರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯ ಮಾತನಾಡಿದ್ದಾರೆ ಎಂದು ವಿವರಿಸಿದರು. ಸಿದ್ದರಾಮಯ್ಯನವರ ಸರಕಾರವು ಅಸ್ತಿತ್ವಕ್ಕೆ ಬಂದು ಒಂದೂಮುಕ್ಕಾಲು ವರ್ಷವಾಗಿದೆ. ಈಗಾಗಲೇ ಸಿದ್ದರಾಮಯ್ಯನವರ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿ ಸೃಷ್ಟಿಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ಇದು ಪ್ರಮುಖ ಉಪ ಚುನಾವಣೆ. ಸರಕಾರ ಅಧಿಕಾರಕ್ಕೆ ಬಂದ 3 ವರ್ಷ, ನಾಲ್ಕು ವರ್ಷಗಳಾದಾಗ ಆಡಳಿತ ವಿರೋಧಿ ಅಲೆ ಕಾಣಿಸಿಕೊಳ್ಳುತ್ತದೆ; ಆದರೆ ರಾಜ್ಯದಲ್ಲಿ ಅತ್ಯಲ್ಪ ಅವಧಿಯಲ್ಲೇ ಅಂದರೆ ಒಂದೂವರೆ ವರ್ಷದಲ್ಲೇ ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿದೆ ಎಂದು ತಿಳಿಸಿದರು.
ಎರಡು ಕಾರಣಗಳಿಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ತಿಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರ ಆಡಳಿತದಲ್ಲಿ ಸಾಲು ಸಾಲು ಹಗರಣಗಳನ್ನು ಬಿಜೆಪಿ ಬೀದಿಗೆ ತರುವ ಕೆಲಸ ಮಾಡಿದೆ. ಮೈಸೂರು ಮುಡಾ ಹಗರಣದಲ್ಲಿ ತಪ್ಪೇ ಮಾಡಿಲ್ಲವೆಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 14 ನಿವೇಶನ ಹಿಂದಿರುಗಿಸುವ ಘೋಷಣೆ ಮಾಡಿ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದರು.
ವಾಲ್ಮೀಕಿ ನಿಗಮದ ಹಗರಣ- ಭ್ರಷ್ಟಾಚಾರದಲ್ಲಿ ಲೆಕ್ಕಾಧಿಕಾರಿ ಚಂದ್ರಶೇಖರ್ ಅವರು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಅನೇಕ ಬೆಳವಣಿಗೆ ಆಗಿದೆ. ಹಗರಣ ಆಗಿಲ್ಲವೆಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಳಿಕ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸದನದಲ್ಲಿ 187 ಕೋಟಿ ಹಗರಣ ಅಲ್ಲ; 87 ಕೋಟಿ ಹಗರಣ ಎಂದು ಒಪ್ಪಿಕೊಂಡರು. ಸಚಿವರೂ ರಾಜೀನಾಮೆ ಕೊಟ್ಟರು ಎಂದು ಮಾಹಿತಿ ನೀಡಿದರು.
ಭ್ರಷ್ಟಾಚಾರದಲ್ಲಿ ಮುಳುಗಿದ ಈ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯದ ಜನರು ಛೀ ಥೂ ಎಂದು ಉಗಿಯುತ್ತಿದ್ದಾರೆ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರು ಎಲ್ಲ ಸಮುದಾಯಗಳನ್ನು ಮರೆತಿದ್ದಾರೆ. ಸಮಾಜ- ಸಮಾಜಗಳ ಮಧ್ಯೆ, ಜಾತಿಗಳ ನಡುವೆ ವಿಷಬೀಜವನ್ನು ಬಿತ್ತುವ ಕೆಲಸದಲ್ಲಿ ಮತ್ತೊಮ್ಮೆ ಸ್ವತಃ ಸಿದ್ದರಾಮಯ್ಯನವರೇ ಅಖಾಡಕ್ಕೆ ಇಳಿದಿರುವುದು ಈ ರಾಜ್ಯದ ದುರ್ದೈವ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ನಡವಳಿಕೆ ನೋಡಿದರೆ ಅಭಿವೃದ್ಧಿ ಬಗ್ಗೆ ಚಕಾರ ಇಲ್ಲ; ಚರ್ಚೆಯೂ ಇಲ್ಲ ಎಂದು ಟೀಕಿಸಿದರು.
ಈ ಸರಕಾರ ಬಂದ ಬಳಿಕ ಅಭಿವೃದ್ಧಿ ಎಂಬುದು ಪ್ರಾರಂಭವೇ ಆಗಿಲ್ಲ. ಗ್ಯಾರಂಟಿಗಳ ಕುರಿತು ಸಾಕಷ್ಟು ಪ್ರಚಾರ ಪಡೆದುಕೊಂಡರು. ಲೋಕಸಭಾ ಚುನಾವಣೆಗೆ ಮತದಾನಕ್ಕೆ 3-4 ದಿನ ಇದ್ದಾಗ ಎಲ್ಲರ ಖಾತೆಗೆ ದುಡ್ಡು ಜಮಾ ಮಾಡುವ ಕೆಲಸವನ್ನು ಮುಖ್ಯಮಂತ್ರಿ, ಕಾಂಗ್ರೆಸ್ ಸರಕಾರ ಮಾಡಿತ್ತು ಎಂದು ಟೀಕಿಸಿದರು.
18-20 ಸಂಸದರನ್ನು ಗೆಲ್ಲಿಸುವ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಇವರ ಅಬ್ಬರದ ಪ್ರಚಾರ, ಜಾಹೀರಾತುಗಳು, ಗ್ಯಾರಂಟಿಗಳ ಅಪಪ್ರಚಾರದ ನಡುವೆ ಬಿಜೆಪಿ- ಜೆಡಿಎಸ್ 19 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ- 17 ಸ್ಥಾನಗಳನ್ನು, ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿದೆ ಎಂದು ವಿವರಿಸಿದರು.
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಜನಾರ್ದನ ರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಅಭ್ಯರ್ಥಿ ಬಂಗಾರು ಹನುಮಂತು, ಪಕ್ಷದ ಪ್ರಮುಖರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.