ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶದಿಂದಾಗಿ ತನ್ನ ಸೇನೆಯಲ್ಲಿದ್ದ 35 ಭಾರತೀಯ ಪ್ರಜೆಗಳನ್ನು ರಷ್ಯಾ ಬಿಡುಗಡೆ ಮಾಡಿದೆ. ಜುಲೈ 2024 ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ನೇರ ಮಧ್ಯಪ್ರವೇಶದ ನಂತರ ಈ ಬೆಳವಣಿಗೆ ನಡೆದಿದೆ.
ರಷ್ಯಾ ಭೇಟಿಯ ವೇಳೆ ಈ ವಿಷಯವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮೋದಿ ಪ್ರಸ್ತಾಪಿಸಿ, ವಂಚನೆಗೆ ಒಳಗಾಗಿ ರಷ್ಯಾದ ಮಿಲಿಟರಿಗೆ ಅನಿವಾರ್ಯವಾಗಿ ಸೇರಿದ್ದ ಭಾರತೀಯ ನಾಗರಿಕರ ಬಿಡುಗಡೆ ಮಾಡಬೇಕೆಂದು ಕೇಳಿದ್ದರು.
ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು ಗುರುವಾರ ಮಾಧ್ಯಮ ಸಂವಾದದಲ್ಲಿ ಈ ಬಗ್ಗೆ ವಿವರಗಳನ್ನು ಒದಗಿಸಿದ್ದು, ಪ್ರಧಾನಿಯವರ ಜುಲೈ ಭೇಟಿಯ ನಂತರ 35 ಜನರನ್ನು ರಷ್ಯಾ ಸೇನೆಯಿಂದ ಬಿಡುಗಡೆ ಮಾಡಲಾಗಿ, ಅದಕ್ಕೂ ಮೊದಲು 10 ಭಾರತೀಯರ ಬಿಡುಗಡೆಯಾಗಿದೆ. ಈ ಮೂಲಕ ಒಟ್ಟು ಬಿಡುಗಡೆಯಾದವರ ಸಂಖ್ಯೆ 40ಕ್ಕೆ ಏರಿದೆ ಎಂದರು.
ಮಾನವ ಕಳ್ಳಸಾಗಣೆಗಾರರ ಕೈಗೆ ಸಿಕ್ಕಿಬಿದ್ದ ಈ ಭಾರತೀಯ ಪ್ರಜೆಗಳಿಗೆ ಉದ್ಯೋಗ ಅವಕಾಶಗಳು ಅಥವಾ ಶೈಕ್ಷಣಿಕ ಕಾರ್ಯಕ್ರಮಗಳ ನೆಪದಲ್ಲಿ ರಷ್ಯಾ ಸೇನೆಗೆ ಸೇರಿಸಲಾಗಿತ್ತು. ನಂತರ, ಅವರ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಉಕ್ರೇನ್ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಭಾಗಿಯಾಗುವಂತೆ ಮಾಡಲಾಯಿತು.
ಪ್ರಸ್ತುತ 45 ಭಾರತೀಯರನ್ನು ರಕ್ಷಿಸಲಾಗಿದೆ ಮತ್ತು ಬಿಡುಗಡೆ ಮಾಡಲಾಗಿದೆ, ಇನ್ನೂ ಸುಮಾರು 50 ಭಾರತೀಯರು ರಷ್ಯಾದ ಸೈನ್ಯದಲ್ಲಿ ಇದ್ದಾರೆ ಎನ್ನಲಾಗಿದೆ. ಅವರ ಬಿಡುಗಡೆಗೆ ಭಾರತ ಸರ್ಕಾರ ರಷ್ಯಾದ ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.