ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಮರು ಆಯ್ಕೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ನವದೆಹಲಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ಸರ್ಕಾರ ರಚನೆಯಾದ ನಂತರ, ಅಧಿಕೃತ ಭಾಷೆಯ ಸಂಸದೀಯ ಸಮಿತಿಯನ್ನು ಪುನರ್ರಚಿಸುವ ನಿಟ್ಟಿನಲ್ಲಿ ಈ ಸಭೆ ನಡೆದಿದೆ.
ಅಮಿತ್ ಶಾ ಅವರು 2019 ರಲ್ಲಿ ಸಮಿತಿಯ ಅಧ್ಯಕ್ಷರಾಗಿ ಮೊದಲ ಬಾರಿಗೆ ಆಯ್ಕೆಯಾದರು.
ಮರು ಆಯ್ಕೆಯಾದ ನಂತರ ಮಾತನಾಡಿದ ಅಮಿತ್ ಶಾ ಅವರು, ಕಳೆದ 75 ವರ್ಷಗಳಿಂದ ನಾವು ಅಧಿಕೃತ ಭಾಷೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದ್ದೇವೆ, ಆದರೆ ಕಳೆದ 10 ವರ್ಷಗಳಲ್ಲಿ ಅದರ ವಿಧಾನದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಸ್ವೀಕರಿಸಿದರೂ ಅದು ಇತರ ಭಾಷೆಗಳಿಗೆ ಪೈಪೋಟಿ ನೀಡಬಾರದು ಎಂದರು.
ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸಮಿತಿಯು ಹಿಂದಿಯನ್ನು ಎಲ್ಲಾ ಸ್ಥಳೀಯ ಭಾಷೆಗಳ ಮಿತ್ರನನ್ನಾಗಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಮತ್ತು ಅದು ಯಾರೊಂದಿಗೂ ಸ್ಪರ್ಧಿಸುವುದಿಲ್ಲ ಎಂದು ಅಮಿತ್ ಶಾ ಹೇಳಿದರು. ‘ಯಾವುದೇ ಸ್ಥಳೀಯ ಭಾಷೆ ಮಾತನಾಡುವವರಿಗೆ ಕೀಳರಿಮೆ ಬಾರದಂತೆ ಎಚ್ಚರ ವಹಿಸಬೇಕು, ಹಿಂದಿಯನ್ನು ಸಾಮಾನ್ಯವಾಗಿ ಒಮ್ಮತ ಮತ್ತು ಸಹಮತದಿಂದ ಕೆಲಸದ ಭಾಷೆಯಾಗಿ ಸ್ವೀಕರಿಸಬೇಕು ಎಂದರು.
ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ದೇಶದ ಭಾಷೆಯಲ್ಲಿ ಆಡಳಿತ ನಡೆಸುವುದು ಬಹಳ ಮುಖ್ಯ ಎಂದು ಗೃಹ ಸಚಿವರು ಒತ್ತಿ ಹೇಳಿದರು ಮತ್ತು ಈ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. “ನಾವು ಶಬ್ದಕೋಶವನ್ನು ರಚಿಸಿದ್ದೇವೆ ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ, ಸ್ಥಳೀಯ ಭಾಷೆಗಳಿಂದ ಹಿಂದಿಗೆ ಸಾವಿರಾರು ಪದಗಳನ್ನು ಸೇರಿಸಿದ್ದೇವೆ” ಎಂದು ಅವರು ಹೇಳಿದರು.
“ಹಿಂದಿಯಲ್ಲಿ ಸಮಾನಾರ್ಥಕ ಪದಗಳು ಲಭ್ಯವಿಲ್ಲದ ಅನೇಕ ಪದಗಳಿವೆ, ಆದರೆ ಇತರ ಭಾಷೆಗಳಿಂದ ಅನೇಕ ಪದಗಳನ್ನು ಸ್ವೀಕರಿಸುವ ಮೂಲಕ ನಾವು ಹಿಂದಿಯನ್ನು ಶ್ರೀಮಂತಗೊಳಿಸಿದ್ದೇವೆ ಮತ್ತು ಅದನ್ನು ಹೊಂದಿಕೊಳ್ಳುವಂತೆ ಮಾಡಿದ್ದೇವೆ. ಈ ಮೂಲಕ ನಿರ್ದಿಷ್ಟ ಭಾಷೆ ಮತ್ತು ಹಿಂದಿ ನಡುವಿನ ಸಂಬಂಧವನ್ನು ಬಲಪಡಿಸಿದ್ದೇವೆ” ಎಂದು ಅವರು ಹೇಳಿದರು.
8ನೇ ಶೆಡ್ಯೂಲ್ನ ಎಲ್ಲಾ ಭಾಷೆಗಳನ್ನು ತಾಂತ್ರಿಕ ಆಧಾರದ ಮೇಲೆ ಸ್ವಯಂಚಾಲಿತವಾಗಿ ಭಾಷಾಂತರಿಸುವ ಸಾಫ್ಟ್ವೇರ್ ಅನ್ನು ಅಧಿಕೃತ ಭಾಷಾ ಇಲಾಖೆ ಅಭಿವೃದ್ಧಿಪಡಿಸುತ್ತಿದೆ ಎಂದು ಅಮಿತ್ ಶಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.