ನವದೆಹಲಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇಂದು ದೇಶವ್ಯಾಪಿಯಾಗಿ ಸಂಭ್ರಮ ಮನೆ ಮಾಡಿದೆ. ಜಗದೋದ್ಧಾರನ ನಾಮಸ್ಮರಣೆಯಲ್ಲಿ ಭಕ್ತರು ಮಿಂದೇಳುತ್ತಿದ್ದು, ಕೃಷ್ಣ ಸ್ಮರಣೆಯನ್ನು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಟ್ಟಿವೆ.
ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಲು ಭಕ್ತರು ದೇವಾಲಯಗಳಿಗೆ ಆಗಮಿಸುತಿದ್ದು, ಅದರಲ್ಲೂ ಕರ್ನಾಟಕದ ಉಡುಪಿ, ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನವು ಶ್ರೀಕೃಷ್ಣನ ಜನ್ಮದಿನದ ಪ್ರಯುಕ್ತ ಸರ್ವಾಲಂಕಾರದಿಂದ ಕಂಗೊಳಿಸುತ್ತಿದೆ.
ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿನ ಬಂಕೆ ಬಿಹಾರಿ ದೇವಾಲಯ, ಪ್ರೇಮ್ ಮಂದಿರ, ಇಸ್ಕಾನ್ ದೇವಾಲಯ ಮತ್ತು ಶ್ರೀ ಕೃಷ್ಣ ಜನ್ಮ ಭೂಮಿ ದೇವಾಲಯ ಸೇರಿದಂತೆ ಸಾವಿರಾರು ದೇವಾಲಯಗಳಲ್ಲಿ ಭಕ್ತರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಜನ್ಮಾಷ್ಟಮಿಯ ಸಂದರ್ಭದಲ್ಲಿ ಎಲ್ಲಾ ನಾಗರಿಕರು ಮತ್ತು ವಿದೇಶದಲ್ಲಿರುವ ಭಾರತೀಯರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ” ಈ ಸಂತೋಷದ ಹಬ್ಬವು ಭಗವಾನ್ ಶ್ರೀ ಕೃಷ್ಣನ ದಿವ್ಯ ಆದರ್ಶಗಳಿಗೆ ನಮ್ಮನ್ನು ಅರ್ಪಿಸಿಕೊಳ್ಳಲು ಪ್ರೇರೇಪಿಸುತ್ತದೆ. ಶ್ರೀಕೃಷ್ಣ ಮತ್ತು ಅರ್ಜುನನ ನಡುವಿನ ಸಂವಾದವಾದ ಶ್ರೀಮದ್ ಭಗವದ್ಗೀತೆಯು ಎಲ್ಲಾ ಮಾನವೀಯತೆಗೆ ಸ್ಫೂರ್ತಿ ಮತ್ತು ಜ್ಞಾನೋದಯದ ಶಾಶ್ವತ ಮೂಲವಾಗಿದೆ” ಎಂದು ಅವರು ಒತ್ತಿ ಹೇಳಿದರು.
ಭಗವಾನ್ ಶ್ರೀ ಕೃಷ್ಣನ ಬೋಧನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಮತ್ತು ದೇಶದ ಪ್ರಗತಿ ಮತ್ತು ಸಮೃದ್ಧಿಗಾಗಿ ಶ್ರಮಿಸಲು ಸಂಕಲ್ಪ ಮಾಡಬೇಕು ಎಂದು ರಾಷ್ಟ್ರಪತಿಗಳು ಕರೆ ನೀಡಿದರು.
ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಕೂಡ ಎಲ್ಲಾ ನಾಗರಿಕರಿಗೆ ಜನ್ಮಾಷ್ಟಮಿಯ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದ್ದಾರೆ. “ಜನ್ಮಾಷ್ಟಮಿಯು ದೈವಿಕ ಪ್ರೀತಿ ಮತ್ತು ಸದಾಚಾರವನ್ನು ಒಳಗೊಂಡಿರುವ ಭಗವಾನ್ ಕೃಷ್ಣನ ಜನ್ಮವನ್ನು ಸೂಚಿಸುವ ಆಳವಾದ ಆಧ್ಯಾತ್ಮಿಕ ಮಹತ್ವದ ದಿನವಾಗಿದೆ” ಎಂದರು.
ಈ ಹಬ್ಬವು ಸನಾತನ ಧರ್ಮದ ಮೌಲ್ಯಗಳನ್ನು ನೆನಪಿಸುತ್ತದೆ, ಕೆಡುಕಿನ ವಿರುದ್ಧ ಒಳಿತಿನ ವಿಜಯ, ಸತ್ಯ ಮತ್ತು ಕರುಣೆಯಿಂದ ಬೇರೂರುವ ಜೀವನವನ್ನು ನಡೆಸುವ ಮಹತ್ವವನ್ನು ನೆನಪಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.