ಬೈಂದೂರು : ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಹೊಳೆಯಂತಾಗುವುದು ಸರ್ವೇ ಸಾಮಾನ್ಯ. ಬಹಳಷ್ಟು ಕಡೆಗಳಲ್ಲಿ ಹೊಳೆಯನ್ನು ದಾಟಲು ಸಮರ್ಪಕ ವ್ಯವಸ್ಥೆಯೇ ಇರುವುದಿಲ್ಲ. ಕೆಲವು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಎಷ್ಟೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡರೂ ಕೆಲವು ಪ್ರದೇಶಗಳು ಗೊತ್ತಿಲ್ಲದಂತೆ ಬಾಕಿ ಉಳಿಯುವ ಪ್ರಮೇಯವೂ ಇರುತ್ತದೆ.
ಇಂತಹದೇ ಪರಿಸ್ಥಿತಿ ಬೈಂದೂರಿನ ಯಳಜಿತ್ ಗ್ರಾಮದ ಹುಲ್ಕಡ್ಕಿ ಗುಡಿಕೇರಿಯಲ್ಲಿ ಉದ್ಭವವಾಗಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬದವರ 2 ವಿಶೇಷಚೇತನ ಮಕ್ಕಳಿಗೆ ಶಾಲೆಗೆ ಹೋಗಲು ಮಾರ್ಗ ಮಧ್ಯದಲ್ಲಿ ಹೊಳೆಯಂತಾಗಿ ಹರಿದುಬರುತ್ತಿರುವ ನೀರು ತೊಡಕಾಗಿದೆ.
ತಂದೆ ತನ್ನ ಮಗನನ್ನು ಎತ್ತಿಕೊಂಡು ಆ ಹೊಳೆಯನ್ನು ದಾಟುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವಾಸ್ತವವೆಂದರೆ ಇಷ್ಟು ವರ್ಷಗಳಿಂದ ಜನಪ್ರತಿನಿಧಿಗಳು ಅತ್ತ ಕಡೆ ಗಮನ ಹರಿಸದೇ ಇದ್ದಿದ್ದು.
ಹೊಳೆ ದಾಟಿ ಶಾಲೆಗೆ ತೆರಳಲು ಕಾಲುಸಂಕವಿಲ್ಲದೆ ಪರದಾಡುತ್ತಿರುವ ಈ ದೃಶ್ಯವನ್ನು ನೋಡಿದ ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ತಕ್ಷಣವೇ ಆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಅಲ್ಲಿನ ಕುಟುಂಬದವರನ್ನು ಭೇಟಿ ಮಾಡಿ ಮಳೆಗಾಲ ನಿಲ್ಲುವವರೆಗೆ ಮತ್ತು ಕಾಲುಸಂಕ ನಿರ್ಮಾಣ ಆಗುವವರೆಗೆ ಆ ಮಕ್ಕಳಿಗೆ ತೊಂದರೆ ಆಗಬಾರದೆಂದು ತಕ್ಷಣವೇ ಸ್ಥಳೀಯ ಕಾರ್ಯಕರ್ತರ ನೆರವಿನೊಂದಿಗೆ ಪ್ರತ್ಯೇಕ ಮನೆ ವ್ಯವಸ್ಥೆ ಮಾಡಲು ಯೋಜನೆ ರೂಪಿಸಿದರಲ್ಲದೆ, ಸ್ವತಃ ತಮ್ಮ ಮನೆಗೇ ಬಂದು ವಾಸಿಸಬಹುದು ಎಂದು ಕೂಡಾ ಅವರಿಗೆ ಧೈರ್ಯ ತುಂಬಿದರು.
ಅಲ್ಲದೆ, ಶೀಘ್ರದಲ್ಲೇ ಕಾಲು ಸಂಕ ನಿರ್ಮಿಸುವುದರೊಂದಿಗೆ, ಆ ಮಕ್ಕಳ ಆರೋಗ್ಯದ ಬಗ್ಗೆಯೂ ಮುಂದಿನ ದಿನಗಳಲ್ಲಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.