ನವದೆಹಲಿ: ಕಳೆದ ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದ ಬಿಜೆಪಿಯ ಹಿರಿಯ ಸಂಸದ ಓಂ ಬಿರ್ಲಾ ಅವರು ಈ ಬಾರಿಯೂ ಎನ್ಡಿಎ ಸ್ಪೀಕರ್ ಅಭ್ಯರ್ಥಿಯಾಗಲಿದ್ದಾರೆ, ಆದರೆ ವಿರೋಧ ಪಕ್ಷವಾದ ಇಂಡಿ ಬ್ಲಾಕ್ ಕಾಂಗ್ರೆಸ್ ಸಂಸದ ಕೆ.ಸುರೇಶ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇಬ್ಬರೂ ಅಭ್ಯರ್ಥಿಗಳು ಇಂದು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ನಾಳೆ ಚುನಾವಣೆ ನಡೆಯಲಿದೆ.
ಸರ್ಕಾರ ಮತ್ತು ಪ್ರತಿಪಕ್ಷಗಳು ಈ ಹುದ್ದೆಗೆ ಒಮ್ಮತಕ್ಕೆ ಬರಲು ವಿಫಲವಾದ ಹಿನ್ನೆಲೆಯಲ್ಲಿ 1946 ರ ನಂತರ ಮೊದಲ ಬಾರಿಗೆ ಉನ್ನತ ಸಂಸದೀಯ ಹುದ್ದೆಗೆ ಚುನಾವಣೆ ನಡೆಯುತ್ತಿದೆ.
ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಹಿರಿಯ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಮತ್ತು ಡಿಎಂಕೆ ಸಂಸದ ಟಿಆರ್ ಬಾಲು ಅವರೊಂದಿಗೆ ಈ ವಿಷಯದ ಬಗ್ಗೆ ಸಭೆ ನಡೆಸಿದ್ದಾರೆ. ಆದರೆ, ಅವರು ಬಿರ್ಲಾ ಅವರ ಉಮೇದುವಾರಿಕೆಯನ್ನು ಅನುಮೋದಿಸುವ ಮೊದಲು ಉಪಸಭಾಪತಿಯ ಹೆಸರನ್ನು ಘೋಷಿಸಲು ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಗೆ ಬೆಂಬಲ ನೀಡಲು ವಿಪಕ್ಷಗಳು ಸಿದ್ಧವಿದ್ದರೂ ಉಪಸಭಾಪತಿ ಸ್ಥಾನವನ್ನು ವಿರೋಧ ಪಕ್ಷದ ಅಭ್ಯರ್ಥಿಗೆ ನೀಡಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಸ್ಪೀಕರ್ ಹುದ್ದೆಗೆ ಬೆಂಬಲ ಕೋರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡಿದ್ದಾರೆ. ಎನ್ಡಿಎ ಅಭ್ಯರ್ಥಿಗೆ ಬೆಂಬಲ ನೀಡಲು ವಿಪಕ್ಷಗಳು ಸಿದ್ಧವಿದೆ, ಸಂಪ್ರದಾಯದಂತೆ ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡಬೇಕು ಎಂದು ಖರ್ಗೆ ಅವರು ತಿಳಿಸಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.