ಬೆಂಗಳೂರು: ಡೀಸೆಲ್- ಪೆಟ್ರೋಲ್ ದರ ಏರಿಕೆ ವಿರೋಧಿಸಿ ಮತ್ತು ಈ ದರ ಏರಿಕೆಯನ್ನು ವಾಪಸ್ ಪಡೆಯಲು ಆಗ್ರಹಿಸಿ ನಾಳೆ (ಜೂನ್ 20, ಗುರುವಾರ) ಎರಡನೇ ಹಂತದ ಹೋರಾಟ ನಡೆಸಲಾಗುವುದು ಎಂದು ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊನ್ನೆ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡಿದ್ದೇವೆ. ನಾಳೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ರಸ್ತೆತಡೆ ಆಂದೋಲನ ನಡೆಸಲಿದ್ದೇವೆ ಎಂದು ವಿವರಿಸಿದರು.
ವಿಪರೀತ ತೆರಿಗೆ ಶುಲ್ಕ ಹೆಚ್ಚಳದ ಅಭಿಯಾನವನ್ನೇ ರಾಜ್ಯ ಸರಕಾರ ನಡೆಸುತ್ತಿದೆ; ಹಲವಾರು ಕ್ಷೇತ್ರಗಳ ತೆರಿಗೆಯನ್ನು ಈ ಸರಕಾರ ಹೆಚ್ಚಿಸಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಸರಕಾರವು ಕರ್ನಾಟಕದ ಜನರ ಜೀವನವನ್ನೇ ಕಷ್ಟದಾಯಕವನ್ನಾಗಿ ಮಾಡಿದೆ ಎಂದು ಟೀಕಿಸಿದರು.
ಜನರ ಬದುಕನ್ನೇ ದುಸ್ತರವನ್ನಾಗಿ ಮಾಡಿದ ಜನವಿರೋಧಿ ಸರಕಾರ ಇದು. ರೈತವಿರೋಧಿ, ಎಸ್ಸಿ, ಎಸ್ಟಿ, ಒಬಿಸಿಗಳ ವಿರೋಧಿ ಸರಕಾರ ಇದಾಗಿದ್ದು, ಸಿದ್ದರಾಮಯ್ಯನವರ ನೇತೃತ್ವದ ಈ ಸರಕಾರ ಕೂಡಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು.
ಆಸ್ತಿ ತೆರಿಗೆಯನ್ನು ಶೇ 20ರಿಂದ ಶೇ 120 ವರೆಗೆ ಹೆಚ್ಚಿಸಿದ್ದಾರೆ. ಮೋಟಾರು ವಾಹನ ತೆರಿಗೆಯನ್ನು ಶೇ 40ರಿಂದ ಶೇ 80ರಷ್ಟು ಹೆಚ್ಚಿಸಿದ್ದಾರೆ. ಅಬಕಾರಿ ತೆರಿಗೆ (ಮದ್ಯ) ಶೇ 20ರಿಂದ ಶೇ 400ವರೆಗೆ ಹೆಚ್ಚಳವಾಗಿದೆ. ಹೆಣ್ಮಕ್ಕಳಿಗೆ ಬಸ್ ಪ್ರಯಾಣದರ ಉಚಿತ ಎನ್ನುತ್ತಿದ್ದರು. ಗಂಡಸರ ಬಸ್ ಪ್ರಯಾಣದರ ಏರಿಸಿದ್ದಾರೆ ಎಂದು ರವಿಕುಮಾರ್ ಅವರು ವಿವರಿಸಿದರು.
ವಿದ್ಯುತ್ ದರವನ್ನೂ ಹೆಚ್ಚಿಸಿದ್ದಾರೆ. ಇದರಿಂದ ಕೈಗಾರಿಕಾ ಉತ್ಪನ್ನಗಳ ದರ ಏರಿದೆ. ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹಧನವನ್ನು ಕಡಿಮೆ ಮಾಡಿದ್ದಾರೆ. ಪ್ರತಿ ಲೀಟರ್ ಹಾಲಿನ ದರ ಏರಿಸಿದ್ದಾರೆ. ಇದರಿಂದ ಹಾಲು, ಮೊಸರು, ತುಪ್ಪ ಮತ್ತಿತರ ಉತ್ಪನ್ನಗಳ ದರ ಏರಿದೆ ಎಂದು ತಿಳಿಸಿದರು.
ಕಾರ್ಮಿಕರ ಮಕ್ಕಳು, ದಲಿತ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಸ್ಕಾಲರ್ಶಿಪ್ ಅನ್ನು ಈ ಸರಕಾರ ರದ್ದು ಮಾಡಿದೆ. ಕಾರ್ಮಿಕರ 4 ಲಕ್ಷ ಮಕ್ಕಳಿಗೆ ಸ್ಕಾಲರ್ಶಿಪ್ಪನ್ನು ಈ ಸರಕಾರ ರದ್ದು ಮಾಡಿದೆ. ರಾಜ್ಯದಲ್ಲಿ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜ, ಗೊಬ್ಬರಗಳ ಬೆಲೆಯನ್ನೂ ಹೆಚ್ಚಿಸಿದ್ದಾರೆ. ದಿನನಿತ್ಯ ಕರ್ನಾಟಕದಲ್ಲಿ ಕೊಲೆಗಳ ಸರಣಿ ನಡೆದಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಈ ಸರಕಾರ ದರ ಏರಿಕೆಗೆ ಯಾವ ಕ್ಷೇತ್ರವನ್ನೂ ಉಳಿಸಿಲ್ಲ ಎಂದು ಟೀಕಿಸಿದರು.
ಈ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಇಂಥ ತೆರಿಗೆ ಹಣವನ್ನು ತೆಲಂಗಾಣದ ಖಾತೆಗಳಿಗೆ ಕಳುಹಿಸುತ್ತಿದೆ. ತಮ್ಮ ಪಾರ್ಟಿ ನಾಯಕರ ಖಾತೆಗೂ ಇರಬಹುದೇನೋ ಎಂದು ಸಂದೇಹ ವ್ಯಕ್ತಪಡಿಸಿದರು. ಎಐಸಿಸಿಗೆ ಹಣ ಕಳುಹಿಸುತ್ತಿದೆ. ರಾಹುಲ್ ಗಾಂಧಿ, ಸುರ್ಜೇವಾಲಾ ಅವರು ಬಂದು ಸಭೆ ನಡೆಸಿ ಹೋಗುತ್ತಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ, ಸುರ್ಜೇವಾಲಾ ಅವರು ಯಾವ್ಯಾವಾಗ ಬಂದು ಸಭೆ ನಡೆಸಿ ಹೋಗುತ್ತಾರೋ, ಅವಾಗ ಪೆಟ್ರೋಲಿಯಂ, ಡೀಸೆಲ್ ದರ ಏರಿದೆ. ಮದ್ಯ, ಹಾಲು ಮತ್ತಿತರ ದರ ಏರಿದೆ. ಯಾವಾಗ ಕೇಂದ್ರ ಕಾಂಗ್ರೆಸ್ ನಾಯಕರು ಬಂದು ಹೋಗಿದ್ದಾರೋ ಆಗೆಲ್ಲ ಕರ್ನಾಟಕದ ಜನತೆಗೆ ಬರೆ ಹಾಕುವ ಕೆಲಸವನ್ನು ಕಾಂಗ್ರೆಸ್ಸಿನ ಅಖಿಲ ಭಾರತ ನಾಯಕರು ಕರ್ನಾಟಕಕ್ಕೆ ಬಂದು ಮಾಡಿದ್ದಾರೆ. ಆದ್ದರಿಂದ ಸರಕಾರವು ಕೂಡಲೇ ಡೀಸೆಲ್- ಪೆಟ್ರೋಲ್ ದರ ಏರಿಕೆಯನ್ನು ಇಳಿಸಬೇಕು ಎಂದು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.