ಬೆಂಗಳೂರು: ರಾಜ್ಯದ ಜನರು ಯಡಿಯೂರಪ್ಪನವರ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಪೂರಕವಾಗಿ ಹೈಕೋರ್ಟ್ ತೀರ್ಪು ಬಂದಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಕೇಸು ದಾಖಲಿಸಿದ ಬಳಿಕ ಯಡಿಯೂರಪ್ಪನವರು ವಿಚಾರಣೆ ಎದುರಿಸಿದ್ದರು. ಹೇಳಿಕೆ, ಧ್ವನಿ ಸ್ಯಾಂಪಲ್ ಕೊಟ್ಟಿದ್ದರು. ದೆಹಲಿಗೆ ಹೋಗಿರುವ ಕಾರಣ 17ರಂದು ವಿಚಾರಣೆ ಹಾಜರಾಗುವುದಾಗಿ ಪತ್ರದ ಮೂಲಕ ಸಿಐಡಿಗೆ ತಿಳಿಸಿದ್ದರೂ ಕೂಡ ಅವರನ್ನು ಬಂಧಿಸಬೇಕೆಂಬ ದುರುದ್ದೇಶ ಸರಕಾರಕ್ಕೆ ಇತ್ತು. ಆ ದುರುದ್ದೇಶ ವಿಫಲವಾಗಿದೆ. ಕಾಂಗ್ರೆಸ್ ನಾಯಕರ ಷಡ್ಯಂತ್ರಕ್ಕೆ ಹೈಕೋರ್ಟ್ ಪೂರ್ಣವಿರಾಮ (ಫುಲ್ ಸ್ಟಾಪ್) ಹಾಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕೊಲೆ, ದರೋಡೆ, ದ್ವೇಷದ ರಾಜಕಾರಣ ನಡೆದಿದೆ. ಸರಕಾರದ ಬಗ್ಗೆ ಜನರು ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದರು. ಆ ಮುಜುಗರದಿಂದ ತಪ್ಪಿಸಲು ಯಡಿಯೂರಪ್ಪ ಅವರನ್ನು ಬಂಧಿಸಲು, ಕಾಂಗ್ರೆಸ್ ನಾಯಕರ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಸಿಐಡಿ ಅಧಿಕಾರಿಗಳು ನಿನ್ನೆ ಬಂಧನ ವಾರಂಟ್ ಪಡೆದಿದ್ದರು. ಇವತ್ತು ಆ ವಾರಂಟ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ವಿವರಿಸಿದರು.
ಹಿರಿಯ ನಾಯಕರು, ಜನಪ್ರಿಯ ಜನನಾಯಕರು, ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ದುರುದ್ದೇಶದಿಂದ ಹಾಕಿದ ಪ್ರಕರಣದಲ್ಲಿ ಪೋಕ್ಸೊ ಸೆಕ್ಷನ್ಗಳನ್ನು ಸೇರಿಸಿ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸವನ್ನು ರಾಜಕೀಯ ವಿರೋಧಿಗಳು ಮಾಡಿ, ಷಡ್ಯಂತ್ರದ ಕೇಸು ದಾಖಲಿಸಿದ್ದರು. ಈ ಕೇಸಿಗೆ ಸಂಬಂಧಿಸಿ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ. ಇದನ್ನು ಬಿಜೆಪಿ ಸ್ವಾಗತ ಮಾಡುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.