ಬೆಂಗಳೂರು: ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್ಇಪಿ) ರಾಜಕೀಯ ಮೇಲಾಟದ ಕಾರಣ ತಿಲಾಂಜಲಿ ಕೊಟ್ಟು, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ತಿಳಿಸಿದ ಈ ರಾಜ್ಯ ಸರಕಾರ ಇವತ್ತಿನವರೆಗೂ ಯಾವುದೇ ಪ್ರಗತಿಯನ್ನು ಮಾಡದೆ ಇರುವುದು ಒಂದು ಸಾಧನೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ಕಳೆದ ಒಂದು ವರ್ಷದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಮುಂದಿಡುವುದಾಗಿ ತಿಳಿಸಿದರು. ಈ ಸರಕಾರವು ವಿಶೇಷವಾಗಿ ಪದವಿ ತರಗತಿಗಳಲ್ಲಿ, ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ಷೇಪಿಸಿದರು.
ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನೇ ಮಸಕು ಮಾಡುತ್ತಿದೆ ಈ ಸರಕಾರ ಎಂದು ಟೀಕಿಸಿದ ಅವರು, ನಮ್ಮಲ್ಲಿ ಸಿಬಿಎಸ್ಇ, ಐಸಿಎಸ್ಇ ಸೇರಿದಂತೆ ಕೇಂದ್ರ ಪಠ್ಯಕ್ರಮದ ಶಾಲೆಗಳು, ಜೊತೆಗೆ ಸ್ವಾಯತ್ತ ವಿಶ್ವವಿದ್ಯಾಲಯಗಳು ಇವೆ. ಆ ವಿದ್ಯಾರ್ಥಿಗಳಿಗೆ ಒಂದು ನೀತಿಯಾದರೆ, ಸರಕಾರಿ ಶಾಲೆಗೆ ಇನ್ನೊಂದು ನೀತಿ ಎಂದು ಆರೋಪಿಸಿದರು. ಇದು ಇಬ್ಬಗೆಯ ನೀತಿ ಎಂದರು.
ನಮ್ಮ ಸರಕಾರಿ ಶಾಲೆಯ ಮಕ್ಕಳಿಗೆ ಕೌಶಲ್ಯವನ್ನು ಯಾರು ಕಲಿಸುತ್ತಾರೆ? ಇವರು ಒಂದು ಶಿಕ್ಷಣ ನೀತಿ ಸಮಿತಿ ರಚಿಸಿದ್ದರು. ಆ ಸಮಿತಿಯನ್ನು ಸಮರ್ಥವಾಗಿ ಮುನ್ನಡೆಸಲೂ ಈ ರಾಜ್ಯ ಸರಕಾರಕ್ಕೆ ಆಗುತ್ತಿಲ್ಲ. ರಾಜ್ಯ ಸರಕಾರದಲ್ಲಿ ಪೂರ್ಣಾವಧಿ ಶಿಕ್ಷಣ ಸಚಿವರೇ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು.
ಪೂರ್ಣಾವಧಿ ಶಿಕ್ಷಣ ಸಚಿವರ ಅಗತ್ಯವಿದ್ದು, ಅದನ್ನು ಮನಗಾಣದ ಸರಕಾರ ಇದೆ. ಆದ್ದರಿಂದ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ, ಅವರ ಭವಿಷ್ಯವನ್ನೇ ಹಾಳು ಮಾಡುವ ಕೆಲಸವನ್ನು ರಾಜ್ಯ ಸರಕಾರ ಮಾಡಿದ್ದೇ ದೊಡ್ಡ ಕೊಡುಗೆÉ ಎಂದು ದೂರಿದರು.
5, 8, 9ನೇ ತರಗತಿಗಳ ಮೌಲ್ಯಮಾಪನ, ಬೋರ್ಡ್ ಎಕ್ಸಾಮ್ ಮಾಡುವುದಾಗಿ ಸರಕಾರ ಹೊರಟಿದೆ. ಮಕ್ಕಳು, ಪೋಷಕರು, ಶಾಲಾ ಮುಖ್ಯಸ್ಥರ ಜೊತೆ ಸಂವಾದ ಮಾಡಿ ಉದ್ದೇಶ ಸ್ಪಷ್ಟಗೊಳಿಸದೇ ನ್ಯಾಯಾಲಯದ ವರೆಗೆ ಪ್ರಕರಣ ಹೋಗಿತ್ತು. ನ್ಯಾಯಾಲಯದ ತಡೆಯಾಜ್ಞೆ, ಅದರ ತೆರವು, ಪರೀಕ್ಷೆ ದಿನ ಪ್ರಕಟಿಸುವುದು- ಹೀಗೆ ನಡೆದು ಈಗ ಫಲಿತಾಂಶ ಪ್ರಕಟಿಸಿಲ್ಲ. ಎಳೆ ಮಕ್ಕಳ ಮನಸ್ಥಿತಿ, ಪೋಷಕರ ಆತಂಕವನ್ನು ಗಣನೆಗೇ ತೆಗೆದುಕೊಂಡಿಲ್ಲ. ಈ ಮಕ್ಕಳಿಗೆ ಮತ ಇಲ್ಲದ ಕಾರಣ ಹೀಗೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಜೊತೆ ಚೆಲ್ಲಾಟ, ಅವರ ಜೀವನವನ್ನು ಅಂಧಕಾರಕ್ಕೆ ಒಯ್ಯುತ್ತಿದ್ದಾರೆ. ವಿದ್ಯಾರ್ಥಿ ಜೀವನ ಮಸಕು ಮಾಡುವುದೂ ಒಂದು ಗ್ಯಾರಂಟಿ ಎಂದು ಈ ಸರಕಾರ ಭಾವಿಸಿದೆ ಎಂದು ಟೀಕಿಸಿದರು.
ಮಕ್ಕಳ ಆತಂಕ ನಿವಾರಣೆ, ವಿಷಾದ ವ್ಯಕ್ತಪಡಿಸುವುದು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈ ಸರಕಾರದ ಶಿಕ್ಷಣ ಸಚಿವರಿಂದ ಆಗಿಲ್ಲ ಎಂದ ಅವರು, ನಮ್ಮ ರಾಜ್ಯದ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಅತ್ಯಂತ ಚೆನ್ನಾಗಿದೆ ಎಂದು ಹಿಂದೆ ಹೆಸರು ಪಡೆದಿತ್ತು. ಇವತ್ತು ಸಿಇಟಿಯನ್ನು ಹಾಳುಗೆಡಹಿದ ಕೀರ್ತಿ ಈ ಸರಕಾರಕ್ಕೆ ಸಲ್ಲುತ್ತದೆ. ಸರ್ವರ್ ಡೌನ್ ಕಾರಣಕ್ಕೆ ಪ್ರವೇಶಪತ್ರ ಪಡೆಯಲು ವಿದ್ಯಾರ್ಥಿಗಳಿಗೆ ಆಗಲಿಲ್ಲ. ಅದೆಷ್ಟೋ ವಿದ್ಯಾರ್ಥಿಗಳು ನನಗೂ ಫೋನ್ ಮಾಡಿದ್ದು, ನಾನು ಸಚಿವರ ಗಮನಕ್ಕೆ ತಂದಿದ್ದೆ. ಅದಕ್ಕೆ ಲೆಕ್ಕವೇ ಇಲ್ಲ. ಪರೀಕ್ಷಾ ಅಕ್ರಮ ತಡೆ ನೆಪವೊಡ್ಡಿ ಒಂದು ಜಿಲ್ಲೆಯ ಹುಡುಗ ಇನ್ನೊಂದು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವಂತೆ ಮಾಡಿದ್ದರು ಎಂದು ಆಕ್ಷೇಪ ಸೂಚಿಸಿದರು. ಮಕ್ಕಳ ಕನಸುಗಳಿಗೆ ಕಲ್ಲು ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವ ರೀತಿ ಮಾಡಬಾರದು ಎಂಬುದಕ್ಕೆ ಮೊನ್ನೆ ನಡೆದ ಪರೀಕ್ಷೆ ಒಳ್ಳೆಯ ಉದಾಹರಣೆ. 3 ಪರೀಕ್ಷೆ ಮಾಡಿ ಮಕ್ಕಳ ಗಾಂಭೀರ್ಯ ಹಾಳು ಮಾಡಿದ್ದಾರೆ. ಆತಂಕ ಹೆಚ್ಚಿಸಿದ್ದಾರೆ. ಮಕ್ಕಳು ಕ್ಯಾಮೆರಾ ಮುಂದೆ ಕುಳಿತು ಬರೆಯುವ ವ್ಯವಸ್ಥೆ ತಂದಿದ್ದಾರೆ. ಇದು ಬೇಸರದ ವಿಷಯ. ಫಲಿತಾಂಶ ಶೇ 30 ಕಡಿಮೆ ಆದಾಗ 1.79 ಲಕ್ಷ ಮಕ್ಕಳಿಗೆ ಕೃಪಾಂಕ ಕೊಟ್ಟು ಪಾಸ್ ಮಾಡಿಸಿ, ಅವರದಲ್ಲದ ತಪ್ಪಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿ ಮಕ್ಕಳನ್ನು ಸಂಕಷ್ಟಕ್ಕೆ ದೂಡಿದ ಖ್ಯಾತಿ ಈ ಸರಕಾರದ್ದು ಎಂದು ಎಸ್. ಸುರೇಶ್ ಕುಮಾರ್ ಅವರು ವಿವರಿಸಿದರು.
15 ಸಾವಿರ ಗ್ರಾಜುವೇಟ್ ಪ್ರೈಮರಿ ಟೀಚರ್ಸ್ (ಜಿಪಿಟಿ) ನೇಮಕಾತಿಗೆ ಸರಕಾರ ಮುಂದಾಯಿತು. 2 ತಿಂಗಳಲ್ಲಿ ನೇಮಕಾತಿಗೆ ಅವಕಾಶ ಇದ್ದರೂ ಅಸ್ತವ್ಯಸ್ತತೆ ಮಾಡಿ, ನೇಮಕ ಮಾಡದೇ, ಕೆಲಸ ಕೊಡದೇ ಎಲ್ಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿದೆ. ಈ ಶೈಕ್ಷಣಿಕ ವರ್ಷವೂ ಸನಿಹದಲ್ಲಿದೆ. ಆದರೆ, ಇದುವರೆಗೂ ರಾಜ್ಯ ಸರಕಾರವು ರಾಜ್ಯದಲ್ಲಿರುವ ಅಧಿಕೃತ ಶಾಲೆಗಳು, ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಲಿಸ್ಟ್ ಬಿಡುಗಡೆಗೆ ಡಿಡಿಪಿಐಗಳಿಗೆ ಸೂಚಿಸಿ ಮೂರ್ನಾಲ್ಕು ತಿಂಗಳಾಗಿದೆ. ಆದರೆ, ಆ ಕೆಲಸ ಆಗಿಲ್ಲ. ಇದು ಮಕ್ಕಳ ಹಕ್ಕುಗಳ ಕುರಿತ ತಿರಸ್ಕಾರವನ್ನು ಸೂಚಿಸುತ್ತದೆ ಎಂದು ನುಡಿದರು. ಇನ್ನೂ ಕೆಲವು ಶಾಲೆಗಳು ಶೈಕ್ಷಣಿಕ ವರ್ಷಾರಂಭಕ್ಕೂ ಮೊದಲೇ ಶಾಲೆ ಪ್ರಾರಂಭಿಸಿವೆ. ಶುಲ್ಕಕ್ಕಾಗಿ ಈ ಕ್ರಮ ಕೈಗೊಂಡಿದ್ದು, ಇದರ ಕುರಿತು ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪುಸ್ತಕ ಯಾವಾಗ ಬರಲಿದೆ ಗೊತ್ತಿಲ್ಲ. ದೇಶದ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಗೆ ಕಾಂಗ್ರೆಸ್ ಸರಕಾರ ಮಾಡಿದ ಘನಂದಾರಿ ಅಪಚಾರಗಳಿವು ಎಂದು ಅವರು ಅಭಿಪ್ರಾಯಪಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.