ಬೆಂಗಳೂರು: ಕಾಂಗ್ರೆಸ್ಸಿನ ದುರಾಡಳಿತ, ದಬ್ಬಾಳಿಕೆ, ರಾಜಕೀಯದ ಅಮಲಿಗೆ ಏನು ಮಾಡಿದರೂ ತಡೆ ಇಲ್ಲ ಎಂಬ ದೌರ್ಜನ್ಯದ ರಾಜಕಾರಣಕ್ಕೆ ಕೊನೆ ಎಳೆಯಬೇಕಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸರ್ಜಾಪುರದಲ್ಲಿ ಡಾ. ಸಿ.ಎನ್.ಮಂಜುನಾಥ್ ಅವರ ಪರವಾಗಿ ನಡೆದ ಸಭೆಯಲ್ಲಿ ಇಂದು ಅವರು ಮಾತನಾಡಿದರು. ಜಯದೇವ ಆಸ್ಪತ್ರೆಯನ್ನು ವಿಶ್ವದಲ್ಲೇ ಗುರುತಿಸುವಂತೆ ಮಾಡಿದ ಡಾ. ಸಿ.ಎನ್.ಮಂಜುನಾಥ್ ಅವರ ಸೇವೆಯನ್ನು ಕೇವಲ ಕರ್ನಾಟಕ ಮಾತ್ರವಲ್ಲ; ತಮಿಳುನಾಡು, ಆಂಧ್ರ, ತಮಿಳುನಾಡು, ಕೇರಳ ಸೇರಿ ಅನೇಕ ರಾಜ್ಯಗಳವರು ಪಡೆದಿದ್ದಾರೆ ಎಂದು ಶ್ಲಾಘಿಸಿದರು.
ಡಾ. ಸಿ.ಎನ್.ಮಂಜುನಾಥ್ ಅವರು ಒತ್ತಾಯಪೂರ್ವಕವಾಗಿ ರಾಜಕಾರಣಕ್ಕೆ ಬಂದವರು. ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭಾವ. ದಬ್ಬಾಳಿಕೆಯ ಆಡಳಿತ ನೀಡುವವರನ್ನು ಮಣಿಸಲು ಅವರು ಎನ್ಡಿಎ- ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆನೆಕಲ್, ಬೆಂಗಳೂರು ದಕ್ಷಿಣ ಭಾಗದ ಮತದಾರರು ಪ್ರಜ್ಞಾವಂತರು. ಅನೇಕ ಭಾಷೆ ಮಾತನಾಡುವ ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಹೆಬ್ಬಗೋಡಿ ಮತದಾರರನ್ನು ದರ್ಶನ ಮಾಡಿದರೆ ದೇಶವನ್ನೇ ದರ್ಶನ ಮಾಡಿದಂತೆ ಎಂದು ತಿಳಿಸಿದರು. 10 ವರ್ಷಗಳ ಮೋದಿಯವರ ಸಾಧನೆಯನ್ನು ಗಮನಿಸಿ ಬಿಜೆಪಿ ಅಭ್ಯರ್ಥಿಗೆ ಮತ ಕೊಡಿ ಎಂದು ವಿನಂತಿಸಿದರು. ಒಂದೆರಡು ದಶಕಗಳ ಹಿಂದೆ ನಮ್ಮ ಪ್ರಧಾನಿ ಎಂದರೆ ಇತರ ದೇಶಗಳಲ್ಲಿ ಭಿಕ್ಷೆಗೆ ಬಂದರೇ? ಸಾಲಕ್ಕಾಗಿ ಬಂದರೇ ಎಂಬಂತೆ ನೋಡುತ್ತಿದ್ದರು. ಆದರೆ, ಕೇವಲ 10 ವರ್ಷಗಳಲ್ಲಿ ಭಾರತವನ್ನು ಸಮರ್ಥ ದೇಶವನ್ನಾಗಿ ಮಾಡಿದವರು ವಿಶ್ವನಾಯಕ ಮೋದಿಜೀ ಅವರು ಎಂದು ವಿಶ್ಲೇಷಿಸಿದರು.
55 ವರ್ಷಗಳ ಕಾಲ ಕಾಂಗ್ರೆಸ್ಸಿನ ಗರೀಬಿ ಹಠಾವೋ ಕೇವಲ ಘೋಷಣೆಯಾಗಿ ಉಳಿಯಿತು. ಮೋದಿಯವರ ದೂರದೃಷ್ಟಿ, 10 ವರ್ಷಗಳಲ್ಲಿ ವಿಶ್ವದ ಅಗ್ರಗಣ್ಯ ದೇಶದತ್ತ ನಮ್ಮ ಭಾರತವನ್ನು ಒಯ್ಯುವ ಸಂಕಲ್ಪಕ್ಕಾಗಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಬೇಕಿದೆ ಎಂದು ತಿಳಿಸಿದರು.
ಡಾ. ಸಿ.ಎನ್.ಮಂಜುನಾಥ್ ಅವರು ಮಾತನಾಡಿ, ದೇಶದ ಭವಿಷ್ಯ ರೂಪಿಸುವ, ದೇಶದ ಇತಿಹಾಸ ಬರೆಯುವ, ದೇಶದ ಸುರಕ್ಷತೆಗೆ ರೂಪರೇಷೆ ಕೊಡುವ ಚುನಾವಣೆ ಇದು ಎಂದರು. ಎನ್ಡಿಎ ಒಕ್ಕೂಟಕ್ಕೆ 400 ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಲು ತಿಳಿಸಿದ್ದಾರೆ. ಈ 400ರ ಪಟ್ಟಿಯಲ್ಲಿ ನಾನೂ ಇರುವಂತೆ ಮತದಾರರು ನೋಡಿಕೊಳ್ಳುವ ವಿಶ್ವಾಸ ಇದೆ ಎಂದು ತಿಳಿಸಿದರು.
ಆನೇಕಲ್ ಆನೆ ಬಲ ನೀಡಲಿದೆ. ಇದೊಂದು ಧರ್ಮಯುದ್ಧ. ಚುನಾವಣೆಯಲ್ಲಿ ಅಡ್ಡದಾರಿ ಹಿಡಿಯದೆ, ಒತ್ತಡ ಹಾಕದೆ, ಭಯಾನಕ ವಾತಾವರಣ ನಿರ್ಮಿಸದೆ ನಡೆಯಬೇಕು. ಇದು ಪ್ರಜಾತಂತ್ರ ವ್ಯವಸ್ಥೆಯ ಮನಸ್ಸಾಕ್ಷಿಗೆ ಮತ ಹಾಕುವ ಅವಕಾಶ. ಮನಸ್ಸಾಕ್ಷಿಗೆ ಅನುಗುಣವಾಗಿ ಮತ ಹಾಕಿ. ಕ್ರಮ ಸಂಖ್ಯೆ ಒಂದರ ಚಿಹ್ನೆ ಕಮಲಕ್ಕೆ ಮತ ಹಾಕಿ. ನಾನು ಚಿಹ್ನೆಯಲ್ಲೂ ಮೊದಲನೇ ಸ್ಥಾನದಲ್ಲಿದ್ದೇನೆ ಎಂದು ಹೇಳಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಸಂವಿಧಾನ ತಿದ್ದುಪಡಿ ಇಲ್ಲವೆಂದು ಪ್ರಧಾನಿಯವರೇ ಹೇಳಿದ್ದಾರೆ. ಅದನ್ನೇ ವಿಪಕ್ಷಗಳು ಬ್ರಹ್ಮಾಸ್ತ್ರ ಮಾಡಿಕೊಂಡಿದ್ದರು ಎಂದು ವಿವರಿಸಿದರು. ಒಂದು ದಿನದ ಕೊಡುಗೆಗಾಗಿ ಮತ ಮಾರಿಕೊಳ್ಳದಿರಿ. ವ್ಯವಸ್ಥೆ ಬದಲಾವಣೆಗಾಗಿ ನನಗೆ ಮತ ಕೊಡಿ ಎಂದು ವಿನಂತಿಸಿದರು.
ಎಂಎಲ್ಸಿ ಗೋಪಿನಾಥ ರೆಡ್ಡಿ ಅವರು ಮಾತನಾಡಿ, ಈ ಚುನಾವಣೆ ಅತ್ಯಂತ ಪ್ರಮುಖವಾದುದು. ಕಳೆದ 10 ವರ್ಷಗಳ ಬದಲಾವಣೆಯ ಮುಂದಿನ ಭಾಗವಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ ಎಂದು ತಿಳಿಸಿದರು. ಜನಪರ ಕಾರ್ಯಕ್ರಮಗಳು, ಸಾಮಾನ್ಯ ವ್ಯಕ್ತಿಗೆ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. 80 ಕೋಟಿ ಜನರಿಗೆ ಗರೀಬ್ ಕಲ್ಯಾಣ್ ಯೋಜನೆಯಡಿ ಅಕ್ಕಿ ಕೊಡುತ್ತಿದ್ದಾರೆ. 4 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. 12 ಕೋಟಿ ಶೌಚಾಲಯ ನಿರ್ಮಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿ ಮೋದಿಯವರು ಹೊರಹೊಮ್ಮಿದ್ದಾರೆ ಎಂದರು.
ಹಲವು ದಶಕಗಳ ಬಳಿಕ ಕೇಂದ್ರದಲ್ಲಿ ಸ್ಥಿರ ಸರಕಾರ ಕೊಟ್ಟಿದ್ದಾರೆ. ನುಡಿದಂತೆ ನಡೆದಿದ್ದಾರೆ. ಎದೆತಟ್ಟಿ ಮತ ಕೇಳುವಂತೆ ಸರಕಾರ ನಡೆಸಿದ್ದಾರೆ. ಭ್ರಷ್ಟಾಚಾರರಹಿತ ಸರಕಾರ ಬಿಜೆಪಿಯದು ಎಂದು ವಿವರಿಸಿದರು. ಬಿಜೆಪಿ ಜನಪರ ಆಡಳಿತ ಗಮನಿಸಿ ಮಂಜುನಾಥ್ ಅವರಿಗೆ ಮತ ಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.